image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮುಂಬೈ-ಗೋವಾ ಹೆದ್ದಾರಿ ವಿಳಂಬಕ್ಕೆ ನಿತಿನ್ ಗಡ್ಕರಿ ತೀವ್ರ ಅಸಮಾಧಾನ

ಮುಂಬೈ-ಗೋವಾ ಹೆದ್ದಾರಿ ವಿಳಂಬಕ್ಕೆ ನಿತಿನ್ ಗಡ್ಕರಿ ತೀವ್ರ ಅಸಮಾಧಾನ

ಮುಂಬೈ : ದಶಕಗಳಿಂದ ಕುಂಟುತ್ತಾ ಸಾಗುತ್ತಿರುವ ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ (NH-66) ಚತುಷ್ಪಥ ಕಾಮಗಾರಿಯ ಅತಿಯಾದ ವಿಳಂಬದ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಣಜಿ ಸಮೀಪದ ಪೋರ್ವೊರಿಮ್‌ನಲ್ಲಿ ಆರು ಪಥಗಳ ಎಲಿವೇಟೆಡ್ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಅವರು, ಯೋಜನೆಯ ವಿಳಂಬದ ಸ್ಥಿತಿ ನೋಡಿ ತಮಗೆ ನಾಚಿಕೆಯಾಗುತ್ತಿದ್ದು, ಈ ರಸ್ತೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ತಾವು ಖಂಡಿತವಾಗಿಯೂ ಬರುವುದಿಲ್ಲ ಎಂದು ಬಹಿರಂಗವಾಗಿ ಘೋಷಿಸುವ ಮೂಲಕ ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದಾರೆ. ತಮ್ಮದೇ ಇಲಾಖೆಯ ಯೋಜನೆಯ ವಿಳಂಬವನ್ನು ಮುಕ್ತವಾಗಿ ಒಪ್ಪಿಕೊಂಡು, ಉದ್ಘಾಟನೆಯಿಂದ ಹಿಂದೆ ಸರಿಯುವ ಮೂಲಕ ಅವರು ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಬರುವ ಅಕ್ಟೋಬರ್‌ನಲ್ಲಿ ಮುಂಬೈ ವಿಮಾನ ನಿಲ್ದಾಣದಿಂದ ಗೋವಾದವರೆಗೆ ರಸ್ತೆ ಮಾರ್ಗವಾಗಿಯೇ ಪ್ರಯಾಣಿಸಿ, ಹೆದ್ದಾರಿಯ ಪ್ರತಿ ಹಂತದ ನಿರ್ಮಾಣ ಗುಣಮಟ್ಟ ಹಾಗೂ ಪ್ರಯಾಣಿಕರ ಅನುಕೂಲವನ್ನು ಖುದ್ದು ತಪಾಸಣೆ ಮಾಡುವುದಾಗಿ ಗಡ್ಕರಿ ತಿಳಿಸಿದರು. ಕಾಮಗಾರಿಯಲ್ಲಿ ವಿಳಂಬ ಧೋರಣೆ ತೋರುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಹಾಗೂ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳನ್ನು ಅಮಾನತುಗೊಳಿಸುವ ವಿಚಾರದಲ್ಲಿ ಈ ವರ್ಷ ತಾವು ಹೊಸ ದಾಖಲೆಯನ್ನೇ ಬರೆಯುವುದಾಗಿ ಗುಡುಗಿದ್ದಾರೆ.

2011ರಲ್ಲಿ ಆರಂಭವಾದ ಈ ಚತುಷ್ಪಥ ಯೋಜನೆಯು ಮೂಲತಃ 2015ರಲ್ಲೇ ಪೂರ್ಣಗೊಳ್ಳಬೇಕಿತ್ತು. ಆದರೆ ಕೊಂಕಣ ಭಾಗದ ಕಡಿದಾದ ಬೆಟ್ಟಗುಡ್ಡ ಪ್ರದೇಶ, ಭೂಸ್ವಾಧೀನದ ಕಾನೂನು ಸಂಘರ್ಷಗಳು, ಗುತ್ತಿಗೆದಾರರ ಸಾಲದ ಸುಳಿ, ಮಳೆಗಾಲದ ಭೂಕುಸಿತ ಹಾಗೂ ಅರಣ್ಯ ಇಲಾಖೆಯ ಅನುಮೋದನೆ ವಿಳಂಬದಂತಹ ವಿವಿಧ ಸವಾಲುಗಳಿಂದಾಗಿ ಯೋಜನೆ ನನೆಗುದಿಗೆ ಬಿದ್ದಿದೆ. ಪ್ರಸ್ತುತ ಮುಂಬೈನಿಂದ ಗೋವಾ ತಲುಪಲು 11 ರಿಂದ 13 ಗಂಟೆಗಳ ಕಾಲ ಬೇಕಾಗುತ್ತಿದ್ದು, ಈ ಅಗಲೀಕರಣ ಕಾಮಗಾರಿ ಸಂಪೂರ್ಣಗೊಂಡರೆ ಪ್ರಯಾಣದ ಅವಧಿಯು ಕೇವಲ 6 ರಿಂದ 7 ಗಂಟೆಗೆ ಇಳಿಕೆಯಾಗಲಿದೆ.

ಎನ್‌ಎಚ್-66 ಹೆದ್ದಾರಿಯು ಕೇವಲ ಮುಂಬೈ ಮತ್ತು ಗೋವಾವನ್ನು ಮಾತ್ರ ಸಂಪರ್ಕಿಸುವುದಿಲ್ಲ; ಇದು ಮುಂದೆ ಕರ್ನಾಟಕದ ಕಾರವಾರ, ಕುಮಟಾ, ಭಟ್ಕಳ, ಉಡುಪಿ, ಮಂಗಳೂರು ಮಾರ್ಗವಾಗಿ ಕೇರಳದವರೆಗೂ ವಿಸ್ತರಿಸುವ ಪ್ರಮುಖ ಕರಾವಳಿ ಆರ್ಥಿಕ ಕಾರಿಡಾರ್ ಆಗಿದೆ. ಮುಂಬೈ-ಗೋವಾ ಭಾಗದ ಕಾಮಗಾರಿ ಪೂರ್ಣಗೊಂಡರೆ ಕರ್ನಾಟಕದ ಕರಾವಳಿ ಭಾಗದ ಪ್ರಯಾಣಿಕರಿಗೆ ಹಾಗೂ ಸರಕು ಸಾಗಣೆಗೆ ಭಾರಿ ಪ್ರಮಾಣದಲ್ಲಿ ಅನುಕೂಲವಾಗಲಿದೆ. ಯೋಜನೆಗಳು ಎಷ್ಟೇ ವಿಳಂಬವಾದರೂ ಉದ್ಘಾಟನೆಗೆ ಮುಗಿಬೀಳುವ ರಾಜಕಾರಣಿಗಳ ನಡುವೆ, ಸಾರ್ವಜನಿಕರ ತೆರಿಗೆ ಹಣ ಹಾಗೂ ಸಮಯ ಪೋಲಾಗಿರುವುದಕ್ಕೆ ಆತ್ಮಾವಲೋಕನ ಮಾಡಿಕೊಂಡು ಉದ್ಘಾಟನೆಯಿಂದ ಹಿಂದೆ ಸರಿದ ಗಡ್ಕರಿಯವರ ಈ ನಿರ್ಧಾರ ಅಪರೂಪದ ರಾಜಕೀಯ ಧೈರ್ಯಕ್ಕೆ ಸಾಕ್ಷಿಯಾಗಿದೆ.

Category
ಕರಾವಳಿ ತರಂಗಿಣಿ