ಶ್ರೀ ನಗರ : ಜಮ್ಮು-ಕಾಶ್ಮೀರದಲ್ಲಿ ಪ್ರಧಾನಿ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 7,000 ಕಾಶ್ಮೀರಿ ಪಂಡಿತ ಸರ್ಕಾರಿ ನೌಕರರಿಗೆ ಉಗ್ರ ಸಂಘಟನೆಗಳಿಂದ ಮತ್ತೆ ಭೀಕರ ಬೆದರಿಕೆ ಕರೆ ಹಾಗೂ ಪತ್ರಗಳು ಬಂದಿದ್ದು, ಕಣಿವೆಯಲ್ಲಿ ತೀವ್ರ ಅಭದ್ರತೆ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯೊಂದಿಗೆ ನಂಟು ಹೊಂದಿದೆ ಎನ್ನಲಾದ 'ಯುನೈಟೆಡ್ ಲಿಬರೇಷನ್ ಕೌನ್ಸಿಲ್' (ULC) ಎಂಬ ಉಗ್ರ ಗುಂಪು, ಪ್ರಧಾನಿ ಪ್ಯಾಕೇಜ್ ಅಡಿಯಲ್ಲಿ ನಿಯೋಜನೆಗೊಂಡಿರುವ ನೌಕರರು ತಕ್ಷಣ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಬೇಕು, ಇಲ್ಲವಾದರೆ ಸಾವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಈ ಬೆದರಿಕೆಯ ಬೆನ್ನಲ್ಲೇ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮೊಬೈಲ್ ಸಂಖ್ಯೆ, ಮನೆ ವಿಳಾಸ ಹಾಗೂ ವಾಹನ ನೋಂದಣಿ ವಿವರಗಳಂತಹ ತೀರಾ ವೈಯಕ್ತಿಕ ಮಾಹಿತಿಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆಲ್ ಪಿಎಂ ಪ್ಯಾಕೇಜ್ ಎಂಪ್ಲಾಯೀಸ್ ಅಸೋಸಿಯೇಷನ್ ಹಾಗೂ ಸಮುದಾಯದ ಪ್ರಮುಖರು ಇದನ್ನು ‘ಗಂಭೀರ ಭದ್ರತಾ ಬಿಕ್ಕಟ್ಟು’ ಎಂದು ಬಣ್ಣಿಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಕನಿಷ್ಠ ಐದು ಬೆದರಿಕೆ ಪತ್ರಗಳು ಹರಿದಾಡಿದ್ದು, ಮಹಿಳೆಯರು-ಪುರುಷರೆಂಬ ಭೇದವಿಲ್ಲದೆ ಕಣಿವೆಯಲ್ಲಿ ಕೆಲಸ ಮಾಡುತ್ತಿರುವ ಕಾಶ್ಮೀರೇತರ ನೌಕರರನ್ನು ಗುರಿಯಾಗಿಸುವುದಾಗಿ ಮತ್ತು ಅವರ ಮೃತದೇಹಗಳನ್ನು ಸ್ವಗ್ರಾಮಗಳಿಗೆ ಕಳುಹಿಸುವುದಾಗಿ ಬೆದರಿಕೆ ಪತ್ರಗಳಲ್ಲಿ ಎಚ್ಚರಿಸಲಾಗಿದೆ.
ಸಮುದಾಯದ ಪ್ರತಿನಿಧಿಗಳು ಹಾಗೂ ನೌಕರರ ಸಂಘಟನೆಗಳು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಸೈಬರ್ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿದ್ದು, ತಕ್ಷಣ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿವೆ. ಅಲ್ಲದೆ, ಝೇವಾನ್, ಮತ್ತನ್ ಹಾಗೂ ವೀರಿನಾಗ್ ಸೇರಿದಂತೆ ನೌಕರರು ವಾಸಿಸುತ್ತಿರುವ ಟ್ರಾನ್ಸಿಟ್ ಕಾಲನಿಗಳು ಮತ್ತು ಬಾಡಿಗೆ ಮನೆಗಳಲ್ಲಿ ತಕ್ಷಣ ಭದ್ರತಾ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಲಾಗಿದೆ. 1990ರ ದಶಕದ ಕಪ್ಪು ದಿನಗಳಲ್ಲಿ ಮುದ್ರಿತ ಪತ್ರಗಳನ್ನು ಗೋಡೆಗಳಿಗೆ ಅಂಟಿಸಿ ಭಯ ಹುಟ್ಟಿಸಲಾಗುತ್ತಿತ್ತು, ಆದರೆ ಈಗ ಅದೇ ತಂತ್ರವನ್ನು ಇಂಟರ್‌ನೆಟ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಜಾರಿಗೆ ತರಲಾಗುತ್ತಿದೆ ಎಂದು ಸ್ಥಳೀಯ ನೌಕರರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಬೆಳವಣಿಗೆಯ ಸುತ್ತ ರಾಜಕೀಯ ಆರೋಪ-ಪ್ರತ್ಯಾರೋಪಗಳೂ ತೀವ್ರಗೊಂಡಿವೆ. ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಈ ಬೆದರಿಕೆಗಳ ಹಿಂದೆ ಆಡಳಿತ ಯಂತ್ರದ ಸಂಚಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರೆ, ಬಿಜೆಪಿ ಇದನ್ನು ಉಗ್ರರಿಗೆ ಬೆಂಬಲ ನೀಡುವ ಹೇಳಿಕೆ ಎಂದು ತೀವ್ರವಾಗಿ ಖಂಡಿಸಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಅಲ್ಪಸಂಖ್ಯಾತ ನೌಕರರ ಮೇಲಿನ ಈ ಬೆದರಿಕೆಯನ್ನು ಲಘುವಾಗಿ ಪರಿಗಣಿಸಬಾರದು ಮತ್ತು ಅವರಿಗೆ ಸೂಕ್ತ ರಕ್ಷಣೆ ಒದಗಿಸಿ ಬೆದರಿಕೆ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 2008 ಮತ್ತು 2015ರಲ್ಲಿ ಕೇಂದ್ರ ಅನುದಾನಿತ ಒಟ್ಟು 6,000 ಹುದ್ದೆಗಳ ಮೂಲಕ ಕಣಿವೆಗೆ ಮರಳಿದ್ದ ಕಾಶ್ಮೀರಿ ಪಂಡಿತರ ಭದ್ರತೆ ಈಗ ಮತ್ತೆ ಸರ್ಕಾರದ ಮುಂದೆ ದೊಡ್ಡ ಪ್ರಶ್ನೆಯಾಗಿ ನಿಂತಿದೆ.