ಮುಂಬೈ: ಬ್ಯಾಂಕ್ ಸಾಲಕ್ಕಿಂತ ದುಪ್ಪಟ್ಟು ಹಣವನ್ನು ಸರ್ಕಾರ ಈಗಾಗಲೇ ವಸೂಲಿ ಮಾಡಿದ್ದರೂ ತಮ್ಮನ್ನು 'ಆರ್ಥಿಕ ಅಪರಾಧಿ' ಮತ್ತು 'ವಂಚಕ' ಎಂದು ಕರೆಯುತ್ತಿರುವುದಕ್ಕೆ ಉದ್ಯಮಿ ವಿಜಯ್ ಮಲ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ (X) ಖಾತೆಯಲ್ಲಿ ಜಾರಿ ನಿರ್ದೇಶನಾಲಯ (ED) ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್ ದಾಖಲೆಗಳನ್ನು ಉಲ್ಲೇಖಿಸಿ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಮೇಲಿನ ಪಲಾಯನ ಆರೋಪವನ್ನು ತಳ್ಳಿಹಾಕಿರುವ ಮಲ್ಯ, "ನಾನು ಭಾರತದಿಂದ ಓಡಿಹೋದವನಲ್ಲ, 1992ರಿಂದಲೂ ಬ್ರಿಟನ್‌ನ ಖಾಯಂ ನಿವಾಸಿಯಾಗಿದ್ದೇನೆ. ಬ್ರಿಟನ್‌ನ ಸ್ಥಳೀಯ ಕಾನೂನು ನಿಯಮಗಳ ಕಾರಣದಿಂದಾಗಿ ದೇಶ ಬಿಟ್ಟು ತೆರಳದಂತೆ ನನಗೆ ನಿರ್ಬಂಧವಿದ್ದು, ಭಾರತಕ್ಕೆ ಬರದೆ ಇರುವುದು ಪಲಾಯನವಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕುಗಳಿಗೆ ಬರಬೇಕಿದ್ದ ಅಸಲು ಸಾಲ ಸುಮಾರು 6,203 ಕೋಟಿ ರೂಪಾಯಿ ಮಾತ್ರವಾಗಿತ್ತು. ಆದರೆ ಇಡಿ ಈಗಾಗಲೇ ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು 14,131.60 ಕೋಟಿ ರೂಪಾಯಿಗೂ ಅಧಿಕ ಹಣ ವಸೂಲಿ ಮಾಡಿದೆ. ಮೂಲ ಸಾಲಕ್ಕಿಂತ ಹೆಚ್ಚುವರಿ ಹಣ ವಸೂಲಿ ಮಾಡಿರುವ ಸರ್ಕಾರವೇ ನನಗೆ ಬಾಕಿ ಹಣ ನೀಡಬೇಕು ಎಂದು ಅವರು ವಾದಿಸಿದ್ದಾರೆ.
ಕಿಂಗ್‌ಫಿಷರ್ ಏರ್‌ಲೈನ್ಸ್ ನೌಕರರ ವೇತನ ಪಾವತಿ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, "ನನ್ನ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದರಿಂದಲೇ ನಾನಾಗಿಯೇ ನೌಕರರಿಗೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ. ಆದರೆ ಇಡಿ ಜಪ್ತಿ ಮಾಡಿದ ನಿಧಿಯಿಂದಲೇ 350 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನೌಕರರ ವೇತನಕ್ಕಾಗಿ ಬಿಡುಗಡೆ ಮಾಡಿದೆ" ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಬಾಂಬೆ ಹೈಕೋರ್ಟ್ ಮಲ್ಯ ವಾದಕ್ಕೆ ಕಟು ಶಬ್ದಗಳಲ್ಲಿ ತಿರುಗೇಟು ನೀಡಿದ್ದು, ಅವರು ಉದ್ದೇಶಪೂರ್ವಕವಾಗಿಯೇ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದೆ. ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳ ಪೀಠ, "ನೀವು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ವ್ಯಾಪ್ತಿಯಿಂದ ದೂರ ಉಳಿದಿದ್ದೀರಿ. ಭಾರತಕ್ಕೆ ಬಂದು ನ್ಯಾಯಾಂಗ ಪ್ರಕ್ರಿಯೆ ಎದುರಿಸದೆ ಯಾವುದೇ ಪರಿಹಾರ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಖಡಕ್ ಎಚ್ಚರಿಕೆ ನೀಡಿದೆ.
2018ರ ಕಾಯ್ದೆಯನ್ವಯ ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಸೇರಿದಂತೆ 15 ಮಂದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದ್ದು, ಕೇಂದ್ರ ಸರ್ಕಾರವು ಇವರನ್ನು ಭಾರತಕ್ಕೆ ಗಡಿಪಾರು ಮಾಡಲು ಯುಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಸಾಲದ ಮೊತ್ತ ಮರುಪಾವತಿಯಾಗಿದ್ದರೂ, ಬ್ಯಾಂಕ್ ವಂಚನೆ, ಹಣ ವರ್ಗಾವಣೆ ಹಾಗೂ ಉದ್ದೇಶಪೂರ್ವಕ ಸುಸ್ತಿದಾರನಾಗಿ ವಿದೇಶಕ್ಕೆ ತೆರಳಿದ ಅಪರಾಧದ ಹೊಣೆಗಾರಿಕೆಯಿಂದ ಮಲ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಎಂಬುದು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.