image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಳುವಾದ ಬೈಕ್‌ನಲ್ಲಿ ಖಾಕಿ ಧಾರಿ ಮಹಿಳೆಯ ಸವಾರಿ: ಟ್ರಾಫಿಕ್ ದಂಡದ ಫೋಟೋ ನೋಡಿ ಆಘಾತಕ್ಕೊಳಗಾದ ವಾಹನ ಮಾಲಕಿ!

ಕಳುವಾದ ಬೈಕ್‌ನಲ್ಲಿ ಖಾಕಿ ಧಾರಿ ಮಹಿಳೆಯ ಸವಾರಿ: ಟ್ರಾಫಿಕ್ ದಂಡದ ಫೋಟೋ ನೋಡಿ ಆಘಾತಕ್ಕೊಳಗಾದ ವಾಹನ ಮಾಲಕಿ!

ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ ನಗರದಲ್ಲಿ ಅತ್ಯಂತ ಆಘಾತಕಾರಿ ಹಾಗೂ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದ್ದು, ಮಹಿಳಾ ಅಧಿಕಾರಿಯೊಬ್ಬರ ಕಳುವಾಗಿದ್ದ ದ್ವಿಚಕ್ರ ವಾಹನವನ್ನು ಖಾಕಿ ಸಮವಸ್ತ್ರ ಧರಿಸಿದ ಮಹಿಳೆಯೊಬ್ಬಳು ರಸ್ತೆಯಲ್ಲಿ ರಾಜಾರೋಷವಾಗಿ ಚಲಾಯಿಸುತ್ತಿರುವ ದೃಶ್ಯ ಸೆರೆಯಾಗಿದೆ. ಹಮೀದಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ 32 ವರ್ಷದ ನೀಲು ಸಾಹು ಎಂಬುವವರಿಗೆ ಈ ಕಹಿ ಅನುಭವ ಎದುರಾಗಿದೆ.

ಆಗಸ್ಟ್ 22ರ ಬೆಳಗ್ಗೆ ನೀಲು ಸಾಹು ಅವರು ಕರ್ತವ್ಯಕ್ಕಾಗಿ ಆಸ್ಪತ್ರೆಗೆ ಬಂದಾಗ ಆವರಣದ ಹೊರಗೆ ನಿಲ್ಲಿಸಿದ್ದ ಅವರ ದ್ವಿಚಕ್ರ ವಾಹನ ಕಳುವಾಗಿತ್ತು. ವಾಹನದ ಜತೆಗೆ ಅದರಲ್ಲಿದ್ದ ಬ್ಯಾಗ್, ಮೊಬೈಲ್, ಕಂಪ್ಯೂಟರ್ ಮಾಹಿತಿ ಶೇಖರಣಾ ಸಾಧನ, ಎಟಿಎಂ ಕಾರ್ಡ್ ಹಾಗೂ ಕಾರಿನ ಡಿಜಿಟಲ್ ಕೀ ಕೂಡ ನಾಪತ್ತೆಯಾಗಿದ್ದವು. ಈ ಕುರಿತು ಅವರು ಕೊಹ್-ಎ-ಫಿಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಸೆಪ್ಟೆಂಬರ್ 2ರಂದು ಅವರ ಮನೆಗೆ ಬಂದ ಸಂಚಾರ ದಂಡದ ರಸೀದಿ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ನಗರದ ರೋಶನ್‌ಪುರ ವೃತ್ತದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಸ್ವಯಂಚಾಲಿತ ಕ್ಯಾಮೆರಾ ಕ್ಲಿಕ್ಕಿಸಿದ ಫೋಟೋ ನೋಡಿ ದಂಪತಿ ಬೆಚ್ಚಿಬಿದ್ದಿದ್ದಾರೆ. ಕಳುವಾಗಿದ್ದ ಅದೇ ದ್ವಿಚಕ್ರ ವಾಹನವನ್ನು ಖಾಕಿ ಸಮವಸ್ತ್ರ ಧರಿಸಿದ್ದ ಮಹಿಳೆಯೊಬ್ಬಳು ಯಾವುದೇ ಹೆದರಿಕೆಯಿಲ್ಲದೆ ಚಲಾಯಿಸುತ್ತಿರುವುದು ರಸೀದಿಯ ಫೋಟೋದಲ್ಲಿ ಸ್ಪಷ್ಟವಾಗಿ ಕಾಣಿಸಿದೆ.

ಸಂತ್ರಸ್ತೆ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿ ರಸೀದಿಯನ್ನು ಸಲ್ಲಿಸಿದ್ದಾರೆ. ಫೋಟೋದಲ್ಲಿರುವ ಮಹಿಳೆ ನಿಜವಾಗಿಯೂ ಪೊಲೀಸ್ ಇಲಾಖೆಯ ಅಧಿಕಾರಿಯೇ ಅಥವಾ ಗುರುತು ಮರೆಮಾಚಲು ನಕಲಿ ಸಮವಸ್ತ್ರ ಧರಿಸಿದ್ದಾಳೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ರೋಶನ್‌ಪುರ ವೃತ್ತದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಸಮವಸ್ತ್ರದಲ್ಲಿದ್ದ ನಿಗೂಢ ಮಹಿಳೆಯನ್ನು ಶೀಘ್ರದಲ್ಲೇ ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೊಹ್-ಎ-ಫಿಜಾ ಪೊಲೀಸ್ ಠಾಣಾಧಿಕಾರಿ ಲೋಕೇಂದ್ರ ಸಿಂಗ್ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ