ಉತ್ತರ ಪ್ರದೇಶ : ಚಿತ್ರಮಂದಿರಗಳಲ್ಲಿ ಅಚ್ಚರಿಯ ಯಶಸ್ಸು ಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿರುವ ಆಧ್ಯಾತ್ಮಿಕ ಕಥಾಹಂದರದ 'ಹನುಮಾನ್ ಅಂಶ್' ಸಿನಿಮಾದ ತಂಡ ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದೆ. ಲಖನೌನಲ್ಲಿರುವ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಮಂಗಳವಾರ ಸಂಜೆ ನಡೆದ ಈ ಸೌಹಾರ್ದಯುತ ಭೇಟಿಯಲ್ಲಿ, ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಹಾಗೂ ಪ್ರಮುಖ ನಟ ಶೋಭಿನವ್ ಸತ್ಯಾ ಪಾಲ್ಗೊಂಡು ಸಿನಿಮಾದ ಯಶಸ್ಸಿನ ಕುರಿತು ಮಾತುಕತೆ ನಡೆಸಿದ್ದಾರೆ.
ಈ ವಿಶೇಷ ಭೇಟಿಯ ಫೋಟೋಗಳು ಮತ್ತು ವಿಡಿಯೋಗಳನ್ನು ಮುಖ್ಯಮಂತ್ರಿ ಕಚೇರಿಯ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿವೆ. ದೈವಿಕ ಹಾಗೂ ಗುರು ನಾಥ ಪರಂಪರೆಯ ಅಂಶಗಳನ್ನು ಒಳಗೊಂಡಿರುವ ಈ ಸಿನಿಮಾದ ಪ್ರಯತ್ನವನ್ನು ಸಿಎಂ ಯೋಗಿ ಆದಿತ್ಯನಾಥ್ ಶ್ಲಾಘಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಖ್ಯಾತ ಸಂತ ನೀಮ್ ಕರೋಲಿ ಬಾಬಾರವರ ಜೀವನ ಹಾಗೂ ಬೋಧನೆಗಳಿಂದ ಪ್ರೇರಣೆ ಪಡೆದು ನಿರ್ಮಿಸಲಾಗಿರುವ 'ಹನುಮಾನ್ ಅಂಶ್' ಚಿತ್ರವು, ಬಾಕ್ಸ್ ಆಫೀಸ್‌ನಲ್ಲಿ ಆರಂಭದಲ್ಲಿ ಸಾಧಾರಣ ಗಳಿಕೆ ಕಂಡಿತ್ತಾದರೂ, ಪ್ರೇಕ್ಷಕರ ಸಕಾರಾತ್ಮಕ ಪ್ರತಿಕ್ರಿಯೆಯಿಂದಾಗಿ ನಂತರದ ದಿನಗಳಲ್ಲಿ ಭಾರಿ ಚೇತರಿಕೆ ಕಂಡಿದೆ. ಸಾಮಾನ್ಯ ಕಮರ್ಷಿಯಲ್ ಸಿನಿಮಾಗಳಿಗಿಂತ ವಿಭಿನ್ನವಾದ ಕಥಾಹಂದರ ಹೊಂದಿದ್ದು, ನಂಬಿಕೆ ಹಾಗೂ ಆಧ್ಯಾತ್ಮಿಕತೆಯ ಸಂದೇಶ ಸಾರುತ್ತಿರುವ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ.
ಆಗಸ್ಟ್ ತಿಂಗಳಲ್ಲಿ ಭಾರತಾದ್ಯಂತ ಬಿಡುಗಡೆಯಾಗಿ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿರುವ ಈ ಸಿನಿಮಾ, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಸೆಪ್ಟೆಂಬರ್ 11ರಂದು ವಿದೇಶಿ ಮಾರುಕಟ್ಟೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಜಾಗತಿಕ ಪ್ರೇಕ್ಷಕರನ್ನು ತಲುಪಲು ಚಿತ್ರತಂಡ ಸಿದ್ಧತೆ ನಡೆಸಿದೆ.