image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಯೋಧ್ಯೆ ರಾಮಮಂದಿರ ಸಿಬ್ಬಂದಿಗೆ ಶೀಘ್ರದಲ್ಲೇ ಹೊಸ ವಸ್ತ್ರಸಂಹಿತೆ, ಶಿಸ್ತಿನ ನೀತಿ: ಸಿಇಒ ಜಿತೇಂದ್ರ ಮಿಶ್ರಾಗೆ ವಿಶೇಷ ಅಧಿಕಾರ

ಅಯೋಧ್ಯೆ ರಾಮಮಂದಿರ ಸಿಬ್ಬಂದಿಗೆ ಶೀಘ್ರದಲ್ಲೇ ಹೊಸ ವಸ್ತ್ರಸಂಹಿತೆ, ಶಿಸ್ತಿನ ನೀತಿ: ಸಿಇಒ ಜಿತೇಂದ್ರ ಮಿಶ್ರಾಗೆ ವಿಶೇಷ ಅಧಿಕಾರ

ಅಯೋಧ್ಯೆ : ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದ ದೇಣಿಗೆ ಕಳ್ಳತನ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ದೇವಾಲಯದ ಆಡಳಿತ ಮತ್ತು ಸಿಬ್ಬಂದಿಯಲ್ಲಿ ಶಿಸ್ತು ಹೆಚ್ಚಿಸಲು ಹೊಸ ನೀತಿಯನ್ನು ಜಾರಿಗೆ ತರಲು ಮುಂದಾಗಿದೆ. ಈಗಾಗಲೇ ದೇಗುಲದ ಪ್ರಥಮ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) ಜಿತೇಂದ್ರ ಮಿಶ್ರಾ ಅವರನ್ನು ಆಯ್ಕೆ ಮಾಡಲಾಗಿದ್ದು, ಮಂದಿರದ ಕೆಲಸ ಕಾರ್ಯಗಳನ್ನು ಹೆಚ್ಚು ಸಂಘಟಿತ ಹಾಗೂ ಶಿಸ್ತುಬದ್ಧಗೊಳಿಸಲು ಹೊಸ ನಿಯಮಾವಳಿಗಳನ್ನು ರೂಪಿಸಲಾಗುತ್ತಿದೆ.

ಟ್ರಸ್ಟ್ ರೂಪಿಸುತ್ತಿರುವ ಈ ನೂತನ ನೀತಿಯಲ್ಲಿ ಸಿಬ್ಬಂದಿಗೆ ನಿರ್ದಿಷ್ಟ ವಸ್ತ್ರಸಂಹಿತೆ (ಡ್ರೆಸ್ ಕೋಡ್) ಜಾರಿಗೊಳಿಸುವುದು ಪ್ರಮುಖ ಯೋಜನೆಯಾಗಿದೆ. ದೇವಾಲಯ ಆಡಳಿತ, ಯಾತ್ರಿಕರ ಸೌಲಭ್ಯ, ಭದ್ರತೆ, ನೈರ್ಮಲ್ಯ ಹಾಗೂ ತಾಂತ್ರಿಕ ಕಾರ್ಯಾಚರಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳಿಗೆ ಅವರ ನಿರ್ದಿಷ್ಟ ಜವಾಬ್ದಾರಿಗೆ ಅನುಗುಣವಾಗಿ ಸಮವಸ್ತ್ರ ನಿಗದಿಪಡಿಸಲಾಗುತ್ತದೆ. ಇದರಿಂದ ಮಂದಿರಕ್ಕೆ ಆಗಮಿಸುವ ಭಕ್ತಾದಿಗಳು ನಿಯೋಜಿತ ಸಿಬ್ಬಂದಿಯನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗಲಿದೆ.

ಈ ಹೊಸ ನೀತಿಯು ಕರ್ತವ್ಯದ ಸ್ವರೂಪ, ಶಿಸ್ತು, ನಡವಳಿಕೆ ಮತ್ತು ಜವಾಬ್ದಾರಿಗಳಿಗೆ ಸಂಬಂಧಿಸಿದ ಸ್ಪಷ್ಟ ನಿಯಮಗಳನ್ನು ಒಳಗೊಂಡಿರಲಿದ್ದು, ದೇವಾಲಯ ಸಂಕೀರ್ಣದಲ್ಲಿ ನಿಯೋಜಿತರಾಗಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಅನ್ವಯಿಸಲಿದೆ. ಇದೇ ವೇಳೆ, ಆಡಳಿತ ಮತ್ತು ಸಿಬ್ಬಂದಿ ನಿರ್ವಹಣೆಯನ್ನು ದಕ್ಷವಾಗಿ ಕೈಗೊಳ್ಳಲು ನೂತನ ಸಿಇಒ ಜಿತೇಂದ್ರ ಮಿಶ್ರಾ ಅವರಿಗೆ ವಿಶೇಷ ಅಧಿಕಾರಗಳನ್ನು ನೀಡಲು ಸಹ ತೀರ್ಮಾನಿಸಲಾಗಿದೆ.

ಪ್ರಸ್ತುತ ನೂತನ ನಿಯಮಾವಳಿಯ ಕರಡು ನೀತಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಟ್ರಸ್ಟ್‌ನಲ್ಲಿ ಚರ್ಚಿಸಿ ಅಂತಿಮಗೊಳಿಸಿದ ನಂತರ ಮಂದಿರದ ಎಲ್ಲಾ ಸಿಬ್ಬಂದಿಗೆ ಅಧಿಕೃತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಗೋವಿಂದ್ ದೇವ್ ಗಿರಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ