ನವದೆಹಲಿ : ಇನ್ಸಾಟ್ 3ಡಿಎಸ್ (INSAT-3DS) ಉಪಗ್ರಹವು ರವಾನಿಸಿರುವ ಇತ್ತೀಚಿನ ಹವಾಮಾನ ಚಿತ್ರಗಳು ದಕ್ಷಿಣ ಭಾರತದ ರೈತರಲ್ಲಿ ಹೊಸ ಭರವಸೆ ಮೂಡಿಸಿವೆ. ಪ್ರಸ್ತುತ ನೈರುತ್ಯ ಮಾನ್ಸೂನ್ ಮಾರುತಗಳು ದೇಶದ ಮಧ್ಯ ಮತ್ತು ಪೂರ್ವ ಭಾರತದ ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಪ್ರಭಾವ ಹೊಂದಿದ್ದರೂ, ಮೋಡಗಳ ಸಾಲುಗಳು ಈಗ ದಕ್ಷಿಣದ ಕಡೆಗೆ ಧಾವಿಸುತ್ತಿರುವ ಸುಳಿವು ಸಿಕ್ಕಿದೆ. ಇದರಿಂದ ಮುಂಬರುವ ದಿನಗಳಲ್ಲಿ ದಕ್ಷಿಣ ಭಾರತದಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
ಉಪಗ್ರಹ ಚಿತ್ರಗಳ ಪ್ರಕಾರ ಹಿಮಾಲಯ, ಇಂಡೋ-ಗಂಗಾ ಬಯಲು ಸೀಮೆ ಮತ್ತು ಮಧ್ಯ ಭಾರತದ ಮೇಲೆ ದಟ್ಟವಾದ ಮೋಡಗಳ ಸಾಲು ಗೋಚರಿಸುತ್ತಿದ್ದು, ಮಾನ್ಸೂನ್ ವಾತಾವರಣದ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರುವುದನ್ನು ಇದು ಖಚಿತಪಡಿಸಿದೆ. ಸಾಮಾನ್ಯವಾಗಿ ಸೆಪ್ಟೆಂಬರ್ ತಿಂಗಳಿನಲ್ಲಿ ಮಾನ್ಸೂನ್ ಕ್ಷೀಣಿಸಲು ಪ್ರಾರಂಭಿಸುತ್ತದೆ. ಆದರೆ ಈ ಬಾರಿ ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿ ಗುಡುಗು ಸಹಿತ ಮಳೆ ಮುಂದುವರಿದಿದ್ದು, ಮಾನ್ಸೂನ್ ಇನ್ನೂ ಶಕ್ತಿಶಾಲಿಯಾಗಿದೆ ಎಂಬುದನ್ನು ಉಪಗ್ರಹ ದತ್ತಾಂಶಗಳು ಸ್ಪಷ್ಟಪಡಿಸಿವೆ.
ಮಧ್ಯ ಮತ್ತು ಉತ್ತರ ಭಾರತದಲ್ಲಿ ಸೆಪ್ಟೆಂಬರ್ ಮಧ್ಯಭಾಗದವರೆಗೂ ಮಳೆಯ ಅಬ್ಬರ ಇರಲಿದ್ದು, ತದನಂತರ ಅಂದರೆ ಸೆಪ್ಟೆಂಬರ್ 20ರ ಸುಮಾರಿಗೆ ಉತ್ತರ ಹಾಗೂ ವಾಯುವ್ಯ ಭಾರತದಲ್ಲಿ ಮಳೆ ತಗ್ಗಲಿದೆ. ಇದೇ ಸಮಯದಲ್ಲಿ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ತೇವಾಂಶ ಭರಿತ ಮೋಡಗಳು ಸಂಪೂರ್ಣವಾಗಿ ದಕ್ಷಿಣ ಭಾರತದತ್ತ ವಾಲಲಿದ್ದು, ಪರ್ಯಾಯ ದ್ವೀಪ ಭಾಗಗಳಲ್ಲಿ ಹೆಚ್ಚಿನ ಮಳೆಯನ್ನು ತರುವ ನಿರೀಕ್ಷೆಯಿದೆ.
ಕರ್ನಾಟಕದಲ್ಲೂ ಇದರ ಪ್ರಭಾವ ಸ್ಪಷ್ಟವಾಗಿ ಕಾಣಿಸಲಿದ್ದು, ದಕ್ಷಿಣ ಒಳನಾಡಿನ ಕೆಲವೆಡೆ ಸೆಪ್ಟೆಂಬರ್ 9ರವರೆಗೂ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಿರುಗಾಳಿ ಸಹಿತ ಗುಡುಗು ಮಳೆಯಾಗುವ ಮುನ್ಸೂಚನೆ ಇದೆ. ಸೆಪ್ಟೆಂಬರ್ 14ರ ವರೆಗೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಲಿದೆ. ಉಳಿದಂತೆ ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಬೀದರ್, ಬಾಗಲಕೋಟೆ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ನಿರೀಕ್ಷೆಯಿದ್ದು, ಒಟ್ಟಾರೆ ಸೆಪ್ಟೆಂಬರ್ ತಿಂಗಳಿನಲ್ಲಿ ಕೃಷಿಗೆ ಅನುಕೂಲಕರವಾದ ಮಳೆಯಾಗುವ ಲಕ್ಷಣಗಳಿವೆ.