ಚೆನ್ನೈ : ತಮಿಳುನಾಡು ವಿಧಾನಸಭೆಯ ಅಧಿವೇಶನದಲ್ಲಿ ರಾಜಕೀಯ ಕಾವು ಪರಮಾವಧಿಗೇರಿದ್ದು, ತಮಿಳಗ ವೆಟ್ರಿ ಕಳಗಂ (TVK) ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ 'ದಳಪತಿ' ವಿಜಯ್ ಅವರ ಆಕ್ರಮಣಕಾರಿ ಭಾಷಣಕ್ಕೆ ವಿರೋಧ ಪಕ್ಷವಾದ ಡಿಎಂಕೆ ತತ್ತರಿಸಿಹೋಗಿದೆ. ವಿಜಯ್ ಅವರ ಖಡಕ್ ಮಾತುಗಳನ್ನು ಸಹಿಸದೇ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ನೇತೃತ್ವದಲ್ಲಿ ಡಿಎಂಕೆ ಶಾಸಕರು ಸದನದಿಂದ ಹೊರನಡೆದಿದ್ದಾರೆ.
ವಿಧಾನಸಭೆಯ ಕಲಾಪದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ, ಆಡಳಿತ ವೈಫಲ್ಯ ಹಾಗೂ ಭ್ರಷ್ಟಾಚಾರದ ಕುರಿತು ಸಭೆಯಲ್ಲಿ ಎದ್ದ ಪ್ರಶ್ನೆಗಳಿಗೆ ಉತ್ತರಿಸಿದ ಮುಖ್ಯಮಂತ್ರಿ ವಿಜಯ್, ಹಳೆಯ ಡಿಎಂಕೆ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. "ನಮ್ಮ ಸರ್ಕಾರ ಸಾರ್ವಜನಿಕರ ಹಿತಾಸಕ್ತಿಗೆ ಆದ್ಯತೆ ನೀಡುತ್ತಿದೆಯೇ ಹೊರತು ಸ್ವಜನಪಕ್ಷಪಾತಕ್ಕಲ್ಲ" ಎಂದು ಗುಡುಗಿದ ವಿಜಯ್, ಪ್ರತಿಪಕ್ಷಗಳ ಆರೋಪಗಳಿಗೆ ಒಂದೊಂದಾಗಿ ಅಂಕಿ-ಅಂಶಗಳ ಸಮೇತ ತಿರುಗೇಟು ನೀಡಿದರು.
"ನಮ್ಮ ಉತ್ತರಗಳನ್ನು ಅಥವಾ ಸತ್ಯವನ್ನು ಎದುರಿಸಲು ಧೈರ್ಯವಿಲ್ಲದವರು ಸದನದಿಂದ ಓಡಿಹೋಗಬಾರದು. ಸೋಮವಾರ ನಾನು ನೀಡುವ ಪ್ರತಿಯೊಂದು ಉತ್ತರಕ್ಕೂ ನೀವು ಇಲ್ಲೇ ಇದ್ದು ಕೇಳಬೇಕು" ಎಂದು ವಿಜಯ್ ನೀಡಿದ ಸವಾಲು ಸದನದಲ್ಲಿದ್ದ ಡಿಎಂಕೆ ನಾಯಕರನ್ನು ಕೆರಳಿಸಿತು.
ವಿಜಯ್ ಅವರ ಭಾಷಣದ ಶೈಲಿ ಮತ್ತು ಭ್ರಷ್ಟಾಚಾರದ ಕುರಿತಾದ ಆರೋಪಗಳನ್ನು ಪ್ರತಿಭಟಿಸಿದ ಪ್ರತಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್, ಸ್ಪೀಕರ್ ಬಳಿ ಮಾತನಾಡಲು ಅವಕಾಶ ಕೋರಿದರು. ಆದರೆ ಸಭೆಯ ಕಲಾಪದ ನಿಯಮಾವಳಿಗಳ ಪ್ರಕಾರ ಸ್ಪೀಕರ್ ಅವಕಾಶ ನೀಡದಿದ್ದಾಗ, ಆಕ್ರೋಶಗೊಂಡ ಡಿಎಂಕೆ ಶಾಸಕರು ಉದಯನಿಧಿ ಅವರ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಸದನದಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ ಸ್ಟಾಲಿನ್, "ಮುಖ್ಯಮಂತ್ರಿ ವಿಜಯ್ ಅವರು ವಿಧಾನಸಭೆಯನ್ನು ಸಿನಿಮಾ ಶೂಟಿಂಗ್ ಸ್ಪಾಟ್ ಅಥವಾ ರೀಲ್ಸ್ ಮಾಡುವ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದರು.
ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅಧಿಕಾರ ವಹಿಸಿಕೊಂಡ ನಂತರದ ಈ ಭರ್ಜರಿ ಭಾಷಣವು ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ತಮ್ಮ ಪಂಚ್ ಡೈಲಾಗ್‌ಗಳು ಹಾಗೂ ದಿಟ್ಟ ಆಡಳಿತಾತ್ಮಕ ಮಾತುಗಳ ಮೂಲಕ ಕೇವಲ ಸಿನಿಮಾದಲ್ಲಿ ಮಾತ್ರವಲ್ಲ, ರಾಜಕೀಯ ರಂಗದಲ್ಲೂ ತಾವೊಬ್ಬ ಶಕ್ತಿಶಾಲಿ ನಾಯಕ ಎಂಬುದನ್ನು ವಿಜಯ್ ಸಾಬೀತುಪಡಿಸಿದ್ದಾರೆ.