ಇಂದೋರ್: ಭಾರತವು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಮೆಟ್ರೋ ರೈಲು ಜಾಲ ಹೊಂದಿರುವ ದೇಶವಾಗಿ ಹೊರಹೊಮ್ಮಲು ಸಜ್ಜಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕವನ್ನು ಹಿಂದಿಕ್ಕಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಅವರು ಘೋಷಿಸಿದ್ದಾರೆ. ಮಧ್ಯಪ್ರದೇಶದ ವಾಣಿಜ್ಯ ನಗರಿ ಇಂದೋರ್‌ನಲ್ಲಿ ವಿಸ್ತರಿತ ಮೆಟ್ರೋ ಮಾರ್ಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ನಗರ ಸಾರಿಗೆ ಜಾಲ ಅತ್ಯಂತ ವೇಗವಾಗಿ ಬೆಳೆಯುತ್ತಿರುವುದನ್ನು ಎತ್ತಿಹಿಡಿದರು.
ಪ್ರಸ್ತುತ ಭಾರತದಲ್ಲಿ ಕಾರ್ಯಾಚರಣೆಯಲ್ಲಿರುವ ಮೆಟ್ರೋ ಜಾಲವು 26 ನಗರಗಳಲ್ಲಿ ಒಟ್ಟು 1,170 ಕಿಲೋಮೀಟರ್‌ಗೆ ವಿಸ್ತರಿಸಿದೆ. ಅಮೆರಿಕದ ಒಟ್ಟು 1,386 ಕಿಲೋಮೀಟರ್ ಮೆಟ್ರೋ ಮಾರ್ಗಕ್ಕೆ ಹೋಲಿಸಿದರೆ ಭಾರತವು ಕೇವಲ 216 ಕಿಲೋಮೀಟರ್‌ಗಳಷ್ಟು ಮಾತ್ರ ಹಿಂದುಳಿದಿದೆ. 2014 ರಲ್ಲಿ ಕೇವಲ 5 ನಗರಗಳಲ್ಲಿ 245 ಕಿಲೋಮೀಟರ್ ಮಾರ್ಗ ಮಾತ್ರ ಕಾರ್ಯಾಚರಣೆಯಲ್ಲಿದ್ದುದಕ್ಕೆ ಹೋಲಿಸಿದರೆ, ಕಳೆದ ಕೆಲವು ವರ್ಷಗಳಲ್ಲಿ ಮೂಲಸೌಕರ್ಯ ಕ್ಷೇತ್ರದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಲಾಗಿದೆ. ಪ್ರಸ್ತುತ ದೇಶಾದ್ಯಂತ ಸುಮಾರು 900 ಕಿಲೋಮೀಟರ್‌ಗೂ ಹೆಚ್ಚು ಹೊಸ ಮಾರ್ಗಗಳ ನಿರ್ಮಾಣ ಮತ್ತು ಯೋಜನಾ ಹಂತದ ಕಾಮಗಾರಿಗಳು ಚಾಲ್ತಿಯಲ್ಲಿದ್ದು, ಶೀಘ್ರದಲ್ಲೇ ಭಾರತವು ಚೀನಾ ನಂತರದ ಜಾಗತಿಕ ಎರಡನೇ ದೊಡ್ಡ ಮೆಟ್ರೋ ಜಾಲ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ ಎಂದರು.
ಇಂದೋರ್‌ನಲ್ಲಿ ಗಾಂಧಿ ನಗರದಿಂದ ಮಾಳವೀಯ ನಗರ ಚೌರಹಾ ಮಾರ್ಗವನ್ನು ಉದ್ಘಾಟಿಸುವುದರೊಂದಿಗೆ, ಇಂದೋರ್ ಮೆಟ್ರೋದ ಕಾರ್ಯಾಚರಣೆ ಮಾರ್ಗವು 6.3 ಕಿಲೋಮೀಟರ್‌ನಿಂದ 17.5 ಕಿಲೋಮೀಟರ್‌ಗೆ ಏರಿಕೆಯಾಗಿದೆ. ಈ ವಿಸ್ತರಿತ ಮಾರ್ಗವು ನಗರದ ಪ್ರಮುಖ ವಸತಿ ಮತ್ತು ವಾಣಿಜ್ಯ ಪ್ರದೇಶಗಳನ್ನು ಸಂಪರ್ಕಿಸಲಿದ್ದು, ಪ್ರತಿದಿನ 80 ಕ್ಕೂ ಹೆಚ್ಚು ಟ್ರಿಪ್‌ಗಳ ಮೂಲಕ ಸಾರ್ವಜನಿಕರಿಗೆ ಸೇವೆ ನೀಡಲಿದೆ. ಶ್ರೇಣಿ-1 ಮತ್ತು ಶ್ರೇಣಿ-2 ನಗರಗಳಲ್ಲಿ ಸುಸ್ಥಿರ ಸಾರಿಗೆ, ವಾಹನ ದಟ್ಟಣೆ ನಿಯಂತ್ರಣ ಹಾಗೂ ಮಾಲಿನ್ಯ ತಡೆಗಟ್ಟುವಲ್ಲಿ ಈ ಆಧುನಿಕ ಮೆಟ್ರೋ ಜಾಲಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದರು.