ನವದೆಹಲಿ: ಶಿಕ್ಷಕರು ಕೇವಲ ಪಠ್ಯಪುಸ್ತಕ ಮತ್ತು ಸಿಲಬಸ್‌ಗೆ ಮಾತ್ರವೇ ಸೀಮಿತವಾಗದೆ, ವಿದ್ಯಾರ್ಥಿಗಳ ಜೀವನದ ಅವಿಭಾಜ್ಯ ಅಂಗವಾಗಬೇಕು ಹಾಗೂ ಯಾವುದೇ ಕಾರಣಕ್ಕೂ ಮಗುವಿನೊಳಗಿನ ಬಾಲ್ಯವನ್ನು ಸಾಯಲು ಬಿಡಬಾರದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಶಿಕ್ಷಕರಿಗೆ ಕರೆ ನೀಡಿದ್ದಾರೆ. ರಾಷ್ಟ್ರೀಯ ಶಿಕ್ಷಕರ ದಿನಾಚರಣೆಯ ಮುನ್ನಾದಿನದಂದು ತಮ್ಮ ಅಧಿಕೃತ ನಿವಾಸದಲ್ಲಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತರೊಂದಿಗೆ ನಡೆದ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಅವರು ಶಿಕ್ಷಕರಿಗೆ ಈ ಪ್ರಮುಖ ಮಾರ್ಗದರ್ಶನ ನೀಡಿದರು.
ಇಂದಿನ ದಿನಗಳಲ್ಲಿ ಮಕ್ಕಳು ಡಿಜಿಟಲ್ ಸಾಧನಗಳು ಹಾಗೂ ಮೊಬೈಲ್ ಪರದೆಗಳಿಗೆ ಅತಿಯಾಗಿ ಅಂಟಿಕೊಳ್ಳುತ್ತಿರುವುದು ಒಂದು ದೊಡ್ಡ ವ್ಯಸನವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿಯವರು ಕಳವಳ ವ್ಯಕ್ತಪಡಿಸಿದರು. ಮಕ್ಕಳ ಸ್ಕ್ರೀನ್ ಟೈಮ್ ಅನ್ನು ಕಡಿಮೆ ಮಾಡಿದರೆ, ಅವರು ಸಹಜವಾಗಿಯೇ ಕ್ರೀಡೆ ಹಾಗೂ ದೈಹಿಕ ಆಟೋಟಗಳತ್ತ ಗಮನ ಹರಿಸುತ್ತಾರೆ. ಇಲ್ಲಿ ಕೇವಲ ವಿಡಿಯೋ ಗೇಮ್‌ಗಳಲ್ಲ, ಬದಲಿಗೆ ಮೈದಾನಕ್ಕೆ ಇಳಿದು ಆಡುವ ದೈಹಿಕ ಆಟಗಳಿಗೆ ಆದ್ಯತೆ ಸಿಗಬೇಕು ಮತ್ತು ಶಾಲೆಗಳಲ್ಲಿ ಸೃಜನಶೀಲ ಚಟುವಟಿಕೆಗಳನ್ನು ಹೆಚ್ಚಿಸಬೇಕು ಎಂದು ಅವರು ಪ್ರತಿಪಾದಿಸಿದರು. ಇದರೊಂದಿಗೆ ಪ್ರಮುಖ ನಗರಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾದಕ ದ್ರವ್ಯ ಜಾಲ ಹರಡುತ್ತಿರುವ ಬಗ್ಗೆ ಎಚ್ಚರಿಸಿದ ಪ್ರಧಾನಿ, ಶಿಕ್ಷಕರು ಮಕ್ಕಳ ನಡವಳಿಕೆಯಲ್ಲಿನ ಹಠಾತ್ ಬದಲಾವಣೆಗಳು ಅಥವಾ ಭಯದ ಲಕ್ಷಣಗಳನ್ನು ಸೂಕ್ಷ್ಮವಾಗಿ ಗಮನಿಸಿ ತಕ್ಷಣವೇ ಜಾಗೃತರಾಗಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಕಿವಿಮಾತು ಹೇಳಿದರು.
ಓದಿನಲ್ಲಿ ಹಿಂದುಳಿದ ಅಥವಾ ಕಡಿಮೆ ಅಂಕ ಗಳಿಸುವ ಮಕ್ಕಳಲ್ಲಿ ಅಡಗಿರುವ ಇತರ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯತೆಯನ್ನು ಪ್ರಧಾನಿ ಮೋದಿ ಸಂವಾದದ ವೇಳೆ ಒತ್ತಿಹೇಳಿದರು. ಇದಕ್ಕೆ ಉತ್ತರಿಸಿದ ಶಿಕ್ಷಕಿಯೊಬ್ಬರು, ಪ್ರತಿಯೊಂದು ಮಗುವಿನಲ್ಲೂ ವಿಭಿನ್ನ ಸಾಮರ್ಥ್ಯ ಹಾಗೂ ಸವಾಲುಗಳಿದ್ದು, ಅವರಲ್ಲಿರುವ ವಿಶೇಷ ಕಲೆ ಹಾಗೂ ನೈಪುಣ್ಯತೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯ ನಡೆಯುತ್ತಿದೆ ಎಂದು ತಮ್ಮ ಅನುಭವ ಹಂಚಿಕೊಂಡರು. ಇದೇ ವೇಳೆ ಕೇಂದ್ರ ಸರ್ಕಾರದ 'ಏಕಲವ್ಯ ಮಾದರಿ ವಸತಿ ಶಾಲೆಗಳ' ಯೋಜನೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಮತ್ತೊಬ್ಬ ಶಿಕ್ಷಕರು, ಈ ಶಾಲೆಗಳು ಇದುವರೆಗೆ ಶಿಕ್ಷಣದಿಂದ ವಂಚಿತರಾಗಿದ್ದ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಹೊಸ ಭರವಸೆಯನ್ನು ಮೂಡಿಸಿವೆ. ಇಂದು ಆ ಬಡ ಕುಟುಂಬಗಳ ಮಕ್ಕಳು ಐಐಟಿ (IIT), ಎನ್‌ಐಟಿ (NIT) ಮತ್ತು ವೈದ್ಯಕೀಯ ಕಾಲೇಜುಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ಉನ್ನತ ಕನಸು ಕಾಣುತ್ತಿದ್ದಾರೆ ಎಂದು ತಿಳಿಸಿದರು.