image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಧಿಕಾರಿಗಳು ನನಗಿಂತ ಚೆನ್ನಾಗಿ ನಟನೆ ಮಾಡ್ತಾರೆ!: ಕಾಮಗಾರಿ ವಿಳಂಬಕ್ಕೆ ಮಂಡಿ ಸಂಸದೆ ಕಂಗನಾ ರಣಾವತ್ ತೀವ್ರ ಆಕ್ರೋಶ

ಅಧಿಕಾರಿಗಳು ನನಗಿಂತ ಚೆನ್ನಾಗಿ ನಟನೆ ಮಾಡ್ತಾರೆ!: ಕಾಮಗಾರಿ ವಿಳಂಬಕ್ಕೆ ಮಂಡಿ ಸಂಸದೆ ಕಂಗನಾ ರಣಾವತ್ ತೀವ್ರ ಆಕ್ರೋಶ

ಮಂಡಿ : ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ಅಧಿಕಾರಿಗಳ ವಿರುದ್ಧ ತೀವ್ರವಾಗಿ ಆಕ್ರೋಶ ಹೊರಹಾಕಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಲಭ್ಯವಿದ್ದರೂ ಕೆಲಸಗಳು ನನೆಗುದಿಗೆ ಬಿದ್ದಿರುವುದಕ್ಕೆ ಅವರು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (MPLAD) ಅಡಿಯಲ್ಲಿ ಮಂಡಿ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗಾಗಿ ಸುಮಾರು 11 ಕೋಟಿ ರೂಪಾಯಿ ಹಣ ಲಭ್ಯವಿದೆ. ಆದರೆ, ಅಧಿಕಾರಿಗಳು ಇದುವರೆಗೆ ಕೇವಲ 50 ಲಕ್ಷ ರೂಪಾಯಿಗಳನ್ನು ಮಾತ್ರವೇ ಬಳಸಿದ್ದಾರೆ ಎಂದು ಕಂಗನಾ ಸಭೆಯಲ್ಲಿ ತಿಳಿಸಿದರು. "ನನಗೆ ಈ ರೀತಿಯ ಸುಳ್ಳು ಭರವಸೆ ನೀಡಬೇಡಿ. ಈ ಹಿಂದಿನ ಸಭೆಗಳಲ್ಲಿ ಶೇ. 90 ರಷ್ಟು ಹಣ ಬಳಕೆಯಾಗಿದೆ ಎಂದು ನನಗೆ ಸುಳ್ಳು ಲೆಕ್ಕ ನೀಡಲಾಗಿತ್ತು, ಆದರೆ ಈಗಿನ ವಾಸ್ತವವೇ ಬೇರೆಯಾಗಿದೆ" ಎಂದು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳ (BDO) ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಅಧಿಕಾರಿಗಳ ಆಲಸ್ಯತನದಿಂದಾಗಿ ಮಾಧ್ಯಮಗಳಲ್ಲಿ ತಮ್ಮ ಅಭಿನಯ ಮತ್ತು ಸಂಸದರ ಕಾರ್ಯವೈಖರಿಯ ಬಗ್ಗೆ ಅಪಹಾಸ್ಯ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಕಂಗನಾ, "ನನಗಿಂತ ಚೆನ್ನಾಗಿ ಈ ಅಧಿಕಾರಿಗಳೇ ನಟನೆ ಮಾಡುತ್ತಾರೆ" ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಸಭೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ತೀವ್ರವಾಗಿ ಅಸಮಾಧಾನಗೊಂಡ ಕಂಗನಾ ರಣಾವತ್, ಆಕ್ರೋಶದ ಭರದಲ್ಲಿ ಅಸಭ್ಯ ಪದಗಳನ್ನು ಬಳಸಿ ತರಾಟೆಗೆ ತೆಗೆದುಕೊಂಡಿರುವುದು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಕ್ಷೇತ್ರದ ಸಂಸದರ ನಿಧಿಯನ್ನು ಸರಿಯಾಗಿ ಬಳಸಿಕೊಂಡು, ಬಾಕಿ ಉಳಿದಿರುವ ಎಲ್ಲಾ ಸಾರ್ವಜನಿಕ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು ಹಾಗೂ ಖರ್ಚು-ವೆಚ್ಚಗಳ ಸಂಪೂರ್ಣ ವರದಿಯನ್ನು ತಮಗೆ ಒಪ್ಪಿಸಬೇಕು ಎಂದು ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

Category
ಕರಾವಳಿ ತರಂಗಿಣಿ