image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಎರಡೇ ತಿಂಗಳಲ್ಲಿ ಸಿಜೆಪಿ ಇಬ್ಭಾಗ: 'ಸಿಜೆಪಿ-ಡೆಮಾಕ್ರಟಿಕ್' ನೂತನ ಬಣ ಘೋಷಣೆ

ಎರಡೇ ತಿಂಗಳಲ್ಲಿ ಸಿಜೆಪಿ ಇಬ್ಭಾಗ: 'ಸಿಜೆಪಿ-ಡೆಮಾಕ್ರಟಿಕ್' ನೂತನ ಬಣ ಘೋಷಣೆ

ನವದೆಹಲಿ : ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜೆನ್-ಝೀಗಳ ಬಲದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ಸ್ಥಾಪನೆಯಾದ ಎರಡೇ ತಿಂಗಳಲ್ಲಿ ಇಬ್ಭಾಗವಾಗಿದೆ. ಸಂಘಟನೆಯ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಮನೀಶ್ ಬ್ರಹ್ಮಭಟ್ ಅವರು ಮೂಲ ಸಂಘಟನೆಯಿಂದ ಹೊರಬಂದು 'ಕಾಕ್ರೋಚ್‌ ಜನತಾ ಪಾರ್ಟಿ-ಡೆಮಾಕ್ರಟಿಕ್' (ಸಿಜೆಪಿ-ಡಿ) ಎಂಬ ನೂತನ ಬಣ ರಚಿಸಿರುವುದಾಗಿ ಘೋಷಿಸಿದ್ದಾರೆ.

ಅಭಿಜಿತ್‌ ದೀಪ್ಕೆ ನೇತೃತ್ವದ ಮೂಲ ಸಿಜೆಪಿಯು ಚಳವಳಿಯ ಯಶಸ್ಸಿನ ಬಳಿಕ ಸ್ವಯಂಸೇವಕರನ್ನು ಕಡೆಗಣಿಸಿದ್ದು, ದೆಹಲಿ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರ 'ಟೀಮ್' ಆಗಿ ಬದಲಾಗಿದೆ ಎಂದು ಮನೀಶ್ ಆರೋಪಿಸಿದ್ದಾರೆ. ಬೀದಿಗಿಳಿದು ಹೋರಾಡಿದ ಕಾರ್ಯಕರ್ತರನ್ನು ಬದಿಗೊತ್ತಿ ರಚಿಸಲಾದ 12 ಸದಸ್ಯರ ರಾಷ್ಟ್ರೀಯ ತಂಡದಲ್ಲಿ 8 ಮಂದಿ ಆಮ್ ಆದ್ಮಿ ಪಕ್ಷದ ಹಿನ್ನೆಲೆಯುಳ್ಳವರಾಗಿದ್ದಾರೆ. ಪ್ರತಿ ರಾಜ್ಯದಿಂದ ಐವರು ಹೋರಾಟಗಾರರನ್ನು ಒಳಗೊಂಡ ಪ್ರಜಾಸತ್ತಾತ್ಮಕ ಮಾದರಿಯನ್ನು ನಾಯಕತ್ವ ನಿರಾಕರಿಸಿದ್ದು, ಸಮಿತಿಯಲ್ಲಿ ಮಹಿಳೆಯರು, ಮುಸ್ಲಿಮರು, ಸಿಖ್ಖರು ಹಾಗೂ ವಿದ್ಯಾರ್ಥಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲಾಗಿಲ್ಲ ಎಂದು ಅವರು ದೂರಿದ್ದಾರೆ.

ಪ್ರಶ್ನೆಪತ್ರಿಕೆ ಸೋರಿಕೆಯಿಂದ ನೊಂದ ಹಾಗೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವುದನ್ನು ಬಿಟ್ಟು, ನಾಯಕತ್ವವು ಸ್ವತಃ 'ಪೇಪರ್ ಮಾಫಿಯಾ' ರೀತಿಯಲ್ಲಿ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿರುವ ಮನೀಶ್, ನೂತನ 'ಸಿಜೆಪಿ-ಡಿ' ಬಣವು ಪಾರದರ್ಶಕತೆಗೆ ಆದ್ಯತೆ ನೀಡಲಿದೆ ಎಂದಿದ್ದಾರೆ. ಸಾಮಾಜಿಕ ಮಾಧ್ಯಮಗಳು, ವಾಟ್ಸ್‌ಆಯಪ್‌ ಹಾಗೂ ಮಿಸ್ಡ್ ಕಾಲ್ ಸೌಲಭ್ಯದ ಮೂಲಕ ಸಾರ್ವಜನಿಕರು ಹೊಸ ಬಣವನ್ನು ಸೇರಬಹುದು ಎಂದು ಅವರು ತಿಳಿಸಿದ್ದಾರೆ.

ಈ ಆರೋಪಗಳನ್ನು ತಳ್ಳಿಹಾಕಿರುವ ಸಿಜೆಪಿ ಮುಖ್ಯಸ್ಥ ಅಭಿಜಿತ್‌ ದೀಪ್ಕೆ, "ಮಹಾರಾಷ್ಟ್ರ ಮುಖ್ಯಮಂತ್ರಿ ನಮ್ಮನ್ನು ಕಾಂಗ್ರೆಸ್‌ನ 'ಬಿ' ಟೀಂ ಎಂದರೆ, ಕೆಲವರು ಆಮ್ ಆದ್ಮಿ ಪಕ್ಷದ 'ಬಿ' ಟೀಂ ಎನ್ನುತ್ತಿದ್ದಾರೆ. ಮೊದಲು ಅವರೆಲ್ಲ ಒಟ್ಟಿಗೆ ಕುಳಿತು ನಾವು ಯಾರ 'ಬಿ' ಟೀಂ ಎಂದು ನಿರ್ಧರಿಸಲಿ, ಆದರೆ ನಾವೆಂದಿಗೂ ವಿದ್ಯಾರ್ಥಿಗಳ 'ಎ' ಟೀಂ" ಎಂದು ತಿರುಗೇಟು ನೀಡಿದ್ದಾರೆ.

Category
ಕರಾವಳಿ ತರಂಗಿಣಿ