ನವದೆಹಲಿ : ಭಾರತ ಮತ್ತು ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜಸ್ಥಾನದ ವಾಯುಪ್ರದೇಶದಲ್ಲಿ ಭಾರತೀಯ ವಾಯುಪಡೆಯು (IAF) 17 ದಿನಗಳ ಬೃಹತ್ ಯುದ್ಧ ತಾಲೀಮು ನಡೆಸಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 7 ರವರೆಗೆ ನಾಗರಿಕ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿ ಅಧಿಕೃತ ನೋಟಮ್ (NOTAM) ಜಾರಿಗೊಳಿಸಲಾಗಿದೆ. ಜೈಸಲ್ಮೇರ್, ಬಾರ್ಮರ್, ಫಲೋಡಿ, ಜೋಧ್‌ಪುರ ಮತ್ತು ನಾಲಾ-ಬಿಕಾನೇರ್ ವಾಯುನೆಲೆಗಳ ವ್ಯಾಪ್ತಿಯ ಸುಮಾರು 40,000 ಅಡಿ ಎತ್ತರದ ವಾಯುಪ್ರದೇಶವನ್ನು ಸೇನಾ ಕಾರ್ಯಾಚರಣೆಗೆ ಸಂಪೂರ್ಣವಾಗಿ ಮೀಸಲಿಡಲಾಗಿದೆ.
ಈ ಸಮರಾಭ್ಯಾಸ ನಡೆಯುವ ಒಂದು ವಲಯವು ಪಾಕಿಸ್ತಾನದ ಅಂತರರಾಷ್ಟ್ರೀಯ ಗಡಿಯಿಂದ ಕೇವಲ 20 ಕಿಲೋಮೀಟರ್ ಅಂತರದಲ್ಲಿರುವುದರಿಂದ ನೆರೆರಾಷ್ಟ್ರದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ. ಭಾರತೀಯ ವಾಯುಪಡೆಯ ಈ ನಡೆಯಿಂದ ತಲ್ಲಣಗೊಂಡಿರುವ ಪಾಕಿಸ್ತಾನದ ರಕ್ಷಣಾ ಸಚಿವಾಲಯ ಹಾಗೂ ಪಡೆಗಳ ಮುಖ್ಯಸ್ಥರ ಕಚೇರಿ ತುರ್ತು ಸಭೆ ನಡೆಸಿದ್ದು, ಗಡಿ ನಿಯಂತ್ರಣ ರೇಖೆ ಹಾಗೂ ಅಂತರರಾಷ್ಟ್ರೀಯ ಗಡಿಯಲ್ಲಿ ತನ್ನ ಪಡೆಗಳಿಗೆ ಕಟ್ಟೆಚ್ಚರ ವಹಿಸಲು ಆದೇಶಿಸಿದೆ. ಜೊತೆಗೆ ಭಾರತದ ವಿಮಾನಗಳ ಚಲನವಲನಗಳನ್ನು ಪತ್ತೆಹಚ್ಚಲು ರೇಡಾರ್ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದೆ.
ಈ ಯುದ್ಧ ತಾಲೀಮು ಜೋಧ್‌ಪುರದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 12 ರವರೆಗೆ ನಡೆಯಲಿರುವ ಬಹುರಾಷ್ಟ್ರೀಯ ವಾಯು ಸಮರಾಭ್ಯಾಸ 'ತರಂಗ್ ಶಕ್ತಿ 2026' ಜತೆಯಲ್ಲೂ ಹೊಂದಿಕೆಯಾಗಲಿದೆ. ಈ ಜಂಟಿ ಕವಾಯತಿನಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್ ಸೇರಿದಂತೆ ಹಲವು ಮಿತ್ರರಾಷ್ಟ್ರಗಳ ಅತ್ಯಾಧುನಿಕ ಫೈಟರ್ ಜೆಟ್‌ಗಳು ಭಾಗವಹಿಸಿ ತೀವ್ರ ಸ್ವರೂಪದ ವಾಯು ಯುದ್ಧ ತಂತ್ರಗಳನ್ನು ಪ್ರದರ್ಶಿಸಲಿವೆ. ಭಾರತದ ರಫೇಲ್, ಸುಖೋಯ್-30 ಎಂಕ್ಯೂಐ, ಮಿರಾಜ್-2000 ಮತ್ತು ತೇಜಸ್ ಲಘು ಯುದ್ಧ ವಿಮಾನಗಳು ವಾಸ್ತವಿಕ ಯುದ್ಧ ಸನ್ನಿವೇಶ, ರಾತ್ರಿ ಕಾರ್ಯಾಚರಣೆ ಹಾಗೂ ಆಕಾಶದಲ್ಲೇ ಇಂಧನ ಮರುಪೂರಣ ಮಾಡಿಕೊಳ್ಳುವ ಸಾಮರ್ಥ್ಯವನ್ನು ಒರೆಗೆ ಹಚ್ಚಲಿವೆ.