ನವದೆಹಲಿ : ದೇಶದಲ್ಲಿ ಕೈಯ್ಯಾರೆ ಮಲ ಸ್ವಚ್ಛಗೊಳಿಸುವ ಪದ್ಧತಿ (ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್) ಸಂಪೂರ್ಣವಾಗಿ ನಿರ್ಮೂಲನೆಯಾಗಿದೆ ಎಂಬ ಕೇಂದ್ರ ಸರ್ಕಾರದ ಪ್ರತಿಪಾದನೆಯನ್ನು ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ಜಮ್ಮು-ಕಾಶ್ಮೀರದ ಮಹಿಳೆಯರು ತೀವ್ರವಾಗಿ ಪ್ರಶ್ನಿಸಿದ್ದಾರೆ. ತಮ್ಮ ಪ್ರದೇಶಗಳಲ್ಲಿ ನೀರಿನ ಫ್ಲಷ್ ವ್ಯವಸ್ಥೆ ಇಲ್ಲದ ಶೌಚಾಲಯಗಳಿಂದ ಸಂಗ್ರಹವಾಗುವ ಮಾನವ ಮಲವನ್ನು ಈಗಲೂ ಕೈಯ್ಯಾರೆ ತೆಗೆಯಲಾಗುತ್ತಿದೆ ಎಂದು ಅವರು ನವದೆಹಲಿಯಲ್ಲಿ ತಮ್ಮ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಸಫಾಯಿ ಕರ್ಮಚಾರಿ ಆಂದೋಲನ (SKA) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'INDIA @ 80' ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಂತ್ರಸ್ತರು, "ನಾವು ಪ್ರತಿದಿನ ಈ ಕೆಲಸ ಮಾಡುತ್ತಿರುವಾಗ ಸರ್ಕಾರ ಈ ಪದ್ಧತಿ ಕೊನೆಗೊಂಡಿದೆ ಎಂದು ಹೇಗೆ ಹೇಳಲು ಸಾಧ್ಯ?" ಎಂದು ಆಕ್ರೋಶ ವ್ಯಕ್ತಪಡಿಸಿದರು. 70 ವರ್ಷದ ಮುಸ್ಸಿ ದೇವಿ, ಅಂಗುರಿ ಬಾಯಿ, ಚಂಜೋತಿಯಾ ದೇವಿ ಹಾಗೂ ಮುಜಾಫರ್ ಅಹ್ಮದ್ ಶೇಖ್ ತಮ್ಮ ಬಾಲ್ಯದಿಂದಲೂ ಈ ಅಮಾನವೀಯ ಕೆಲಸದಲ್ಲಿ ತೊಡಗಿರುವ ಕಥನಗಳನ್ನು ಬಿಚ್ಚಿಟ್ಟು, ಮುಂದಿನ ಪೀಳಿಗೆಗಾದರೂ ಇದರಿಂದ ಮುಕ್ತಿ ಸಿಗಬೇಕು ಎಂದು ಆಗ್ರಹಿಸಿದರು.
ಈ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಮದನ್ ಲೋಕೂರ್ ಹಾಗೂ ಸುಧಾಂಶು ಧುಲಿಯಾ, ದೇಶದ 40ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಒಣ ಶೌಚಾಲಯಗಳು ಇನ್ನೂ ಇರುವುದು ಪ್ರತಿಯೊಬ್ಬ ಭಾರತೀಯನೂ ನಾಚಿಕೆಪಡಬೇಕಾದ ಸಂಗತಿ ಎಂದಿದ್ದಾರೆ. ಈ ಪದ್ಧತಿಯು ಜಾತಿ ವ್ಯವಸ್ಥೆ ಮತ್ತು ಪಿತೃಪ್ರಭುತ್ವದಲ್ಲಿ ಬೇರೂರಿದೆ ಎಂದು ಹೇಳಿದ SKA ಸಂಸ್ಥಾಪಕ ಬೆಜವಾಡ ವಿಲ್ಸನ್, ಮುಂಬರುವ ಒಂದು ವರ್ಷದೊಳಗೆ ಕೈಯ್ಯಾರೆ ಮಲ ಸ್ವಚ್ಛಗೊಳಿಸುವ ಪದ್ಧತಿಯನ್ನು ಸಂಪೂರ್ಣವಾಗಿ ಕೊನೆಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದಾರೆ.