image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಾಯುಪಡೆಯಿಂದ ನಿವೃತ್ತರಾಗಿ 'FLY91' ವಿಮಾನಯಾನ ಸಂಸ್ಥೆಗೆ ಪೈಲಟ್ ಆಗಿ ಸೇರಿದ ಅಭಿನಂದನ್‌ ವರ್ಧಮಾನ್

ವಾಯುಪಡೆಯಿಂದ ನಿವೃತ್ತರಾಗಿ 'FLY91' ವಿಮಾನಯಾನ ಸಂಸ್ಥೆಗೆ ಪೈಲಟ್ ಆಗಿ ಸೇರಿದ ಅಭಿನಂದನ್‌ ವರ್ಧಮಾನ್

ಗೋವಾ : ಪಾಕಿಸ್ತಾನದ ಅತ್ಯಾಧುನಿಕ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಭಾರತೀಯ ವಾಯುಪಡೆಯ ವೀರಚಕ್ರ ಪ್ರಶಸ್ತಿ ಪುರಸ್ಕೃತ ಗ್ರೂಪ್‌ ಕ್ಯಾಪ್ಟನ್‌ ಅಭಿನಂದನ್‌ ವರ್ಧಮಾನ್‌, ವಾಯುಪಡೆಗೆ ನಿವೃತ್ತಿ ನೀಡಿ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಪ್ರವೇಶಿಸಿದ್ದಾರೆ. ಅವರು ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ 'ಎಫ್‌ಎಲ್‌ವೈ91' (FLY91) ನಲ್ಲಿ ಪೈಲಟ್‌ ಆಗಿ ಹೊಸ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅಭಿನಂದನ್ ವರ್ಧಮಾನ್ ಅವರು ಕಳೆದ ಆಗಸ್ಟ್‌ನಲ್ಲಿ ಎಫ್‌ಎಲ್‌ವೈ91 ಸಂಸ್ಥೆಯನ್ನು ಸೇರಿದ್ದಾರೆ ಎಂದು ತಿಳಿದುಬಂದಿದೆ. ಉದ್ಯೋಗಿಗಳ ಗೌಪ್ಯತೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆಯ ವಕ್ತಾರರು ಈ ಕುರಿತು ಅಧಿಕೃತ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಗೋವಾ ಮತ್ತು ಹೈದರಾಬಾದ್ ಅನ್ನು ಕಾರ್ಯಾಚರಣೆಯ ನೆಲೆಗಳನ್ನಾಗಿ ಹೊಂದಿರುವ ಈ ವಿಮಾನಯಾನ ಸಂಸ್ಥೆಯು ಪ್ರಸ್ತುತ ಆರು ಎಟಿಆರ್ 72-600 ವಿಮಾನಗಳ ಮೂಲಕ ಪ್ರಾದೇಶಿಕ ವೈಮಾನಿಕ ಸೇವೆಗಳನ್ನು ಒದಗಿಸುತ್ತಿದೆ.

2019ರ ಫೆಬ್ರವರಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ವೈಮಾನಿಕ ಸಂಘರ್ಷದ ವೇಳೆ ಅಭಿನಂದನ್‌ ವರ್ಧಮಾನ್ ದೇಶದ ಶೌರ್ಯದ ಸಂಕೇತವಾಗಿ ಹೊರಹೊಮ್ಮಿದ್ದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಪಡೆ ನಡೆಸಿದ ಬಾಲಕೋಟ್ ದಾಳಿಯ ಮರುದಿನ ಈ ವೈಮಾನಿಕ ಕಾಳಗ ನಡೆದಿತ್ತು. ಅಂದು ವಿಂಗ್‌ ಕಮಾಂಡರ್‌ ಆಗಿದ್ದ ಅಭಿನಂದನ್, ತಮಗಿಂತ ತಾಂತ್ರಿಕವಾಗಿ ಅತ್ಯಾಧುನಿಕವಾಗಿದ್ದ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವನ್ನು ತಮ್ಮ ಹಳೆಯ ಮಿಗ್‌-21 ಬೈಸನ್‌ ವಿಮಾನದಲ್ಲೇ ಹಿಮ್ಮೆಟ್ಟಿಸಿ ಹೊಡೆದುರುಳಿಸಿದ್ದರು. ಈ ಸಾಹಸದ ನಡುವೆ ಅವರ ವಿಮಾನಕ್ಕೂ ಕ್ಷಿಪಣಿ ತಾಗಿದ್ದರಿಂದ ಪ್ಯಾರಾಚೂಟ್‌ ಮೂಲಕ ಪಾಕಿಸ್ತಾನ ಆಕ್ರಮಿತ ಪ್ರದೇಶಕ್ಕೆ ಇಳಿದು ಸೆರೆಯಾಗಿದ್ದರು.

ಪಾಕಿಸ್ತಾನದ ವಶದಲ್ಲಿ ಸುಮಾರು 60 ಗಂಟೆಗಳ ಕಾಲ ಧೈರ್ಯದಿಂದ ದಿನಗಳೆದ ಅವರನ್ನು ಅಂತಾರಾಷ್ಟ್ರೀಯ ರಾಜತಾಂತ್ರಿಕ ಒತ್ತಡ ಹಾಗೂ ಜಿನೀವಾ ಒಪ್ಪಂದದ ಹಿನ್ನೆಲೆಯಲ್ಲಿ ಮಾರ್ಚ್‌ 1, 2019 ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಬಿಡುಗಡೆ ಮಾಡಲಾಯಿತು. ಅವರ ಅಸಾಧಾರಣ ಶೌರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಭಾರತ ಸರ್ಕಾರವು 2021 ರಲ್ಲಿ 'ವೀರ ಚಕ್ರ' ನೀಡಿ ಗೌರವಿಸಿತು. ಸದ್ಯ ವಾಯುಪಡೆಯಿಂದ ನಿವೃತ್ತರಾಗಿ ವಾಣಿಜ್ಯ ವಿಮಾನಯಾನ ಕ್ಷೇತ್ರಕ್ಕೆ ಧುಮುಕಿರುವ ಅವರ ಈ ನಡೆ ವೃತ್ತಿಜೀವನದ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ.

Category
ಕರಾವಳಿ ತರಂಗಿಣಿ