ಬೆಂಗಳೂರು : ಪ್ರಮುಖ ಸಾರ್ವಜನಿಕ ರಂಗದ ಕೆನರಾ ಬ್ಯಾಂಕ್ ತನ್ನ ಉಳಿತಾಯ ಖಾತೆದಾರರಿಗೆ ಆಘಾತ ನೀಡಿದ್ದು, ಏಟಿಎಂ ವಹಿವಾಟು ಶುಲ್ಕ ಹಾಗೂ ನಿಯಮಗಳನ್ನು ಪರಿಷ್ಕರಿಸಿದೆ. ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿರುವ ನೂತನ ನಿಯಮಗಳ ಪ್ರಕಾರ, ತಿಂಗಳಿಗೆ ಲಭ್ಯವಿದ್ದ ಉಚಿತ ಏಟಿಎಂ ವಹಿವಾಟುಗಳ ಸಂಖ್ಯೆಯನ್ನು 6ರಿಂದ 5ಕ್ಕೆ ತಗ್ಗಿಸಲಾಗಿದೆ. ಈ ಉಚಿತ ಮಿತಿಯೊಳಗೆ ನಗದು ಹಿಂಪಡೆಯುವುದು ಸೇರಿದಂತೆ ಬ್ಯಾಲೆನ್ಸ್ ಪರಿಶೀಲನೆ ಹಾಗೂ ಮಿನಿ ಸ್ಟೇಟ್‌ಮೆಂಟ್‌ನಂತಹ ನಗದುರಹಿತ ವಹಿವಾಟುಗಳೂ ಸೇರಿರುತ್ತವೆ.
ಉಚಿತ ವಹಿವಾಟಿನ ಮಿತಿ ಮೀರಿದ ನಂತರ ಕೆನರಾ ಬ್ಯಾಂಕ್ ಏಟಿಎಂಗಳಲ್ಲಿ ನಡೆಸುವ ಪ್ರತಿ ಹೆಚ್ಚುವರಿ ನಗದು ಹಿಂಪಡೆಯುವಿಕೆಗೆ ₹23 ಪ್ಲಸ್ ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಈ ಹಿಂದೆ ಈ ಶುಲ್ಕ ₹20 ಆಗಿತ್ತು. ಇದಲ್ಲದೆ, ಖಾತೆಯಲ್ಲಿ ಅಗತ್ಯ ಬ್ಯಾಲೆನ್ಸ್ ಇಲ್ಲದೆ ಏಟಿಎಂನಲ್ಲಿ ಹಣ ಹಿಂಪಡೆಯಲು ಯತ್ನಿಸಿ ವಹಿವಾಟು ವಿಫಲವಾದರೆ (Failed Transaction), ಉಚಿತ ಮಿತಿ ದಾಟಿದ ಬಳಿಕ ಬೀಳುವ ದಂಡವನ್ನು ₹17ರಿಂದ ₹23 (+ಜಿಎಸ್‌ಟಿ) ಗೆ ಹೆಚ್ಚಿಸಲಾಗಿದೆ.
ಆದರೆ, ಹಿರಿಯ ನಾಗರಿಕ ಗ್ರಾಹಕರಿಗೆ ತಿಂಗಳಿಗೆ 8 ಉಚಿತ ಏಟಿಎಂ ವಹಿವಾಟುಗಳ ಸೌಲಭ್ಯ ಮುಂದುವರಿದಿದ್ದು, ಈ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಮತ್ತೊಂದೆಡೆ, ಪ್ಲಾಟಿನಂ, ಬಿಸಿನೆಸ್ ಮತ್ತು ಸೆಲೆಕ್ಟ್ ಕಾರ್ಡ್‌ಗಳ ಗ್ರೀನ್ ಪಿನ್ (Green PIN) ಮರುಜನರೇಟ್ ಮಾಡುವ ಶುಲ್ಕವನ್ನು ಬ್ಯಾಂಕ್ ₹23ರಿಂದ ₹5ಕ್ಕೆ ಇಳಿಸಿ ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಹೆಚ್ಚುವರಿ ಶುಲ್ಕಗಳಿಂದ ಬಚಾವ್ ಆಗಲು ಗ್ರಾಹಕರು ಈ ಹೊಸ ದರಗಳನ್ನು ಗಮನದಲ್ಲಿಟ್ಟುಕೊಂಡು ವಹಿವಾಟು ನಡೆಸಬೇಕಿದೆ.