image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಂಗಳೂರು ರೈಲ್ವೆ ಆಡಳಿತದಲ್ಲಿ ಐತಿಹಾಸಿಕ ಬದಲಾವಣೆ: ಸಚಿವ ಅಶ್ವಿನಿ ವೈಷ್ಣವ್‌ ಭೇಟಿಯಾದ ಕ್ಯಾ. ಚೌಟ

ಮಂಗಳೂರು ರೈಲ್ವೆ ಆಡಳಿತದಲ್ಲಿ ಐತಿಹಾಸಿಕ ಬದಲಾವಣೆ: ಸಚಿವ ಅಶ್ವಿನಿ ವೈಷ್ಣವ್‌ ಭೇಟಿಯಾದ ಕ್ಯಾ. ಚೌಟ

ನವದೆಹಲಿ : ದಕ್ಷಿಣ ಕನ್ನಡ ಜಿಲ್ಲೆಯ ಜನರ ದಶಕಗಳ ಕಾಲದ ಬಹುದೊಡ್ಡ ಆಡಳಿತಾತ್ಮಕ ಬೇಡಿಕೆಯೊಂದು ಈಡೇರಿದ್ದು, ಮಂಗಳೂರು ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆ (ಎಸ್‌ಡಬ್ಲ್ಯೂಆರ್) ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಐತಿಹಾಸಿಕ ನಿರ್ಧಾರಕ್ಕಾಗಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರು ನವದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿಯಾಗಿ, ಕರಾವಳಿಯ ಸಮಸ್ತ ಜನರ ಪರವಾಗಿ ಕೃತಜ್ಞತೆ ಹಾಗೂ ಧನ್ಯವಾದ ಸಲ್ಲಿಸಿದರು.  

​ಕರಾವಳಿ ಕರ್ನಾಟಕದ ರೈಲ್ವೆ ವ್ಯವಸ್ಥೆಯು ಇದುವರೆಗೆ ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಹಾಗೂ ಕೊಂಕಣ್‌ ರೈಲ್ವೆ ವಲಯಗಳ ನಡುವೆ ಹಂಚಿಹೋಗಿತ್ತು. ಇದರಿಂದಾಗಿ ಹೊಸ ರೈಲು ಸೇವೆಗಳ ಚಾಲನೆ, ವೇಳಾಪಟ್ಟಿ ಸಂಯೋಜನೆ ಹಾಗೂ ಸಣ್ಣಪುಟ್ಟ ಅಭಿವೃದ್ಧಿ ಕಾಮಗಾರಿಗಳಿಗೂ ಆಡಳಿತಾತ್ಮಕ ತೊಡಕುಗಳು ಎದುರಾಗುತ್ತಿದ್ದವು. ಇದೀಗ ಮಂಗಳೂರು ಭಾಗವನ್ನು (ಉಳ್ಳಾಲದವರೆಗೆ) ಮೈಸೂರು ವಿಭಾಗದ ವ್ಯಾಪ್ತಿಗೆ ತಂದಿರುವುದರಿಂದ ಪ್ರದೇಶದ ರೈಲ್ವೆ ನಿರ್ವಹಣೆ ಅತ್ಯಂತ ಸುಗಮವಾಗಲಿದೆ. ಈ ಮಹತ್ವದ ಬದಲಾವಣೆಯು 2026ರ ಅಕ್ಟೋಬರ್ 1ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ರೈಲ್ವೆ ಇಲಾಖೆಯ ಮೂಲಗಳು ತಿಳಿಸಿವೆ.  

​ಸಚಿವರ ಭೇಟಿಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್‌ ಚೌಟ, "ಸಂಸದರಾಗಿ ಆಯ್ಕೆಯಾದ ಆರಂಭದಿಂದಲೇ ಈ ವಿಷಯವನ್ನು ಪ್ರಮುಖ ಆದ್ಯತೆಯಾಗಿ ತೆಗೆದುಕೊಂಡು ಸಂಸತ್ತಿನಲ್ಲಿ ಹಾಗೂ ಸಚಿವಾಲಯದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಲಾಗಿತ್ತು. ಈ ಪ್ರಮುಖ ನಿರ್ಧಾರವು ಕರ್ನಾಟಕದ ಒಳನಾಡಿನ ರೈಲ್ವೆ ಜಾಲದೊಂದಿಗೆ ಮಂಗಳೂರಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದೆ. ಸ್ಥಳೀಯ ಪ್ರಯಾಣಿಕರ ಸೌಲಭ್ಯಗಳ ಹೆಚ್ಚಳ, ಹೊಸ ಮಾರ್ಗಗಳ ವಿಸ್ತರಣೆ ಹಾಗೂ ಮೂಲಸೌಕರ್ಯ ಮೇಲ್ದರ್ಜೆಗೇರಿಸಲು ಇದು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ" ಎಂದು ಹರ್ಷ ವ್ಯಕ್ತಪಡಿಸಿದರು.  

​ಈ ಸಂದರ್ಭದಲ್ಲಿ ಸಂಸದರ ಮನವಿಗೆ ಧನಾತ್ಮಕವಾಗಿ ಸ್ಪಂದಿಸಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಮಂಗಳೂರು ಹಾಗೂ ಕರಾವಳಿ ಭಾಗದ ರೈಲ್ವೆ ಯೋಜನೆಗಳು, ಅಮೃತ್ ಭಾರತ್ ನಿಲ್ದಾಣ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದಿಂದ ಸಂಪೂರ್ಣ ಬೆಂಬಲ ಹಾಗೂ ಅಗತ್ಯ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಹೊಸ ಆಡಳಿತಾತ್ಮಕ ವಿಲೀನದಿಂದಾಗಿ ಮಂಗಳೂರು-ಬೆಂಗಳೂರು ನಡುವಿನ ಸರಕು ಹಾಗೂ ಪ್ರಯಾಣಿಕರ ರೈಲು ಸಂಚಾರಕ್ಕೆ ಹೆಚ್ಚಿನ ವೇಗ ಸಿಗಲಿದೆ.

Category
ಕರಾವಳಿ ತರಂಗಿಣಿ