image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಪ್ರಥಮ ಸಿಇಒ

ಅಯೋಧ್ಯೆ ರಾಮಮಂದಿರ ಟ್ರಸ್ಟ್‌ಗೆ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಪ್ರಥಮ ಸಿಇಒ

ಉತ್ತರ ಪ್ರದೇಶ : ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಆಡಳಿತ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಸುಧಾರಿಸುವ ನಿಟ್ಟಿನಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ. ಭಾರತೀಯ ವಾಯುಪಡೆಯ ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರನ್ನು ಶ್ರೀರಾಮ ಮಂದಿರದ ಪ್ರಥಮ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಗಿದೆ. ದೇವಾಲಯದ ಕಾಣಿಕೆ ಹಣದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಮತ್ತು ಕಳ್ಳತನದ ಆರೋಪಗಳ ವಿವಾದದ ನಡುವೆ ಬುಧವಾರ ನಡೆದ ಟ್ರಸ್ಟ್‌ನ ನಿರ್ಣಾಯಕ ಸಭೆಯಲ್ಲಿ ಈ ನೇಮಕಾತಿ ಆದೇಶವನ್ನು ಅಧಿಕೃತವಾಗಿ ಹೊರಡಿಸಲಾಗಿದೆ.

2020ರ ಫೆಬ್ರವರಿ 5 ರಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಟ್ರಸ್ಟ್‌ನ ಮೂಲ ನಿಯಮಾವಳಿಗೆ (Trust Deed) ತಿದ್ದುಪಡಿ ತರಲಾಗಿದೆ. 12 ಪ್ರಮುಖ ಅಂಶಗಳನ್ನೊಳಗೊಂಡ ಅಜೆಂಡಾದೊಂದಿಗೆ ನಡೆದ ಸಭೆಯಲ್ಲಿ, ನೂತನ ಸಿಇಒಗೆ ವಿಸ್ತಾರವಾದ ಆಡಳಿತಾತ್ಮಕ, ಶಾಸನಬದ್ಧ ಮತ್ತು ಹಣಕಾಸು ನಿರ್ವಹಣೆಯ ಪರಮಾಧಿಕಾರಗಳನ್ನು ನೀಡಿ ಅಧಿಕೃತಗೊಳಿಸಲಾಯಿತು. ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ಪ್ರತಿಪಾದಿಸಿದಂತೆ, ಬೃಹತ್ ಮಟ್ಟದ ದೇವಸ್ಥಾನದ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಪೂರ್ಣ ಪ್ರಮಾಣದ ವೃತ್ತಿಪರತೆ ಹಾಗೂ ಪಾರದರ್ಶಕತೆ ತರಲು ಈ ಪೂರ್ಣಾವಧಿ ಸಿಇಒ ಹುದ್ದೆ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ. ಈ ಸಿಇಒ ಸರ್ಕಾರಿ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದ್ದು, ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಗೆ ವರದಿ ಮಾಡಲಿದ್ದಾರೆ.

ದೇವಾಲಯದ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಲು ಪ್ರಧಾನ ಕಾರ್ಯದರ್ಶಿಯವರ ಅಧೀನದಲ್ಲೇ ಶಾಶ್ವತ 'ಸ್ಥಳೀಯ ಭದ್ರತಾ ಸಮನ್ವಯ ಸಮಿತಿ' (Local Security Coordination Committee) ರಚಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದೆ. ಇದರೊಂದಿಗೆ ಕಳೆದ ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ದೇವಾಲಯದ ಅಧಿಕೃತ ಮಾಧ್ಯಮ ವಕ್ತಾರರ ನೇಮಕಾತಿಯ ಪ್ರಕ್ರಿಯೆಗೂ ಹಸಿರು ನಿಶಾನೆ ತೋರಿಸಲಾಗಿದೆ. ದೇವಾಲಯದ ಕಾಣಿಕೆ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ, ಜೂನ್ 26 ರಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹಾಗೂ ಟ್ರಸ್ಟಿ ಅನಿಲ್ ಮಿಶ್ರಾ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು. ಈ ಘಟನೆಯ ಬಳಿಕ ನಡೆದ ಮೂರನೇ ಪ್ರಮುಖ ಸಭೆಯಲ್ಲಿ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ (SIT) ಪ್ರಗತಿ ಪರಿಶೀಲನೆ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಕಾನೂನು ಪ್ರಕ್ರಿಯೆಗಳ ಕುರಿತೂ ಸುದೀರ್ಘ ಚರ್ಚೆ ನಡೆಸಲಾಯಿತು. ನಿವೃತ್ತ ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ ಅವರ ನೇಮಕ ಹಾಗೂ ನಿಯಮಾವಳಿಗಳ ತಿದ್ದುಪಡಿಯೊಂದಿಗೆ ಅಯೋಧ್ಯೆ ರಾಮ ಮಂದಿರದ ಆಡಳಿತವು ಹೊಸ ಸ್ವರೂಪ ಪಡೆದುಕೊಂಡಿದೆ.

Category
ಕರಾವಳಿ ತರಂಗಿಣಿ