image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅರ್ಜೆಂಟಿನಾದಲ್ಲಿ ಲಿಥಿಯಂ ಗಣಿಗಾರಿಕೆ: ಭಾರತದ ಖನಿಜ ಭದ್ರತೆಗೆ ಪ್ರಮುಖ ಕ್ರಮ

ಅರ್ಜೆಂಟಿನಾದಲ್ಲಿ ಲಿಥಿಯಂ ಗಣಿಗಾರಿಕೆ: ಭಾರತದ ಖನಿಜ ಭದ್ರತೆಗೆ ಪ್ರಮುಖ ಕ್ರಮ

ನವದೆಹಲಿ: ಭಾರತವು ತನ್ನ ಖನಿಜ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಅರ್ಜೆಂಟಿನಾದ ಗಣಿಗಾರಿಕೆ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ಲಿಥಿಯಂ ಮೂಲಕ ಆರಂಭವಾಗಿರುವ ಈ ಸಹಕಾರವು ಮುಂದಿನ ದಿನಗಳಲ್ಲಿ ಅಪರೂಪದ ಖನಿಜಗಳ (Rare Earth Elements) ಕ್ಷೇತ್ರಕ್ಕೂ ವಿಸ್ತರಿಸುವ ನಿರೀಕ್ಷೆಯಿದೆ. ಬ್ಯೂನಸ್ ಐರಿಸ್‌ನಲ್ಲಿ ನಡೆದ ಭಾರತ–ಅರ್ಜೆಂಟಿನಾ ಜಂಟಿ ವ್ಯಾಪಾರ ಸಮಿತಿಯ (JTC) 4ನೇ ಸಭೆಯಲ್ಲಿ ವಾಣಿಜ್ಯ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ನೇತೃತ್ವದ ಭಾರತೀಯ ನಿಯೋಗವು ಈ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದೆ.

ಭಾರತದ ಸರ್ಕಾರಿ ಸ್ವಾಮ್ಯದ ಖನಿಜ್ ಬಿದೇಶ್ ಇಂಡಿಯಾ ಲಿಮಿಟೆಡ್ (KABIL) ಸಂಸ್ಥೆಯು ಅರ್ಜೆಂಟಿನಾದ ಕ್ಯಾಟಮಾರ್ಕಾ ಪ್ರಾಂತ್ಯದಲ್ಲಿ ಸುಮಾರು 15,703 ಹೆಕ್ಟೇರ್ ಪ್ರದೇಶದ 5 ಬ್ಲಾಕ್‌ಗಳಲ್ಲಿ ನಡೆಸುತ್ತಿದ್ದ 2ನೇ ಹಂತದ ಕೊರೆತ ಕಾರ್ಯವನ್ನು ಪೂರ್ಣಗೊಳಿಸಿದೆ. ಸಾಲ್ಟಾ ಮತ್ತು ಜುಜುಯ್ ಪ್ರಾಂತ್ಯಗಳಲ್ಲಿಯೂ ಹೊಸ ಗಣಿಗಾರಿಕೆ ಅವಕಾಶಗಳನ್ನು ಗುರುತಿಸಲು ಎರಡೂ ದೇಶಗಳು ನಿರ್ಧರಿಸಿವೆ. 2024ರ ಜನವರಿಯಲ್ಲಿ 200 ಕೋಟಿ ರೂ. ವೆಚ್ಚದ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದರೂ, ವಿದೇಶಿ ಅನ್ವೇಷಣಾ ಹಂತಗಳಲ್ಲಿನ ವಿಳಂಬದಿಂದಾಗಿ 2029ರಲ್ಲಿ ಪ್ರಾರಂಭವಾಗಬೇಕಿದ್ದ ಉತ್ಪಾದನೆಯು ಡಿಸೆಂಬರ್ 2030ಕ್ಕೆ ಮುಂದೂಡಲ್ಪಟ್ಟಿದೆ.

ವಿದ್ಯುತ್ ವಾಹನಗಳ (EV) ಬ್ಯಾಟರಿಗಳು ಹಾಗೂ ಅತ್ಯಾಧುನಿಕ ತಂತ್ರಜ್ಞಾನಕ್ಕೆ ಲಿಥಿಯಂ ಅತ್ಯಗತ್ಯವಾಗಿದ್ದು, ಜಾಗತಿಕ ಸಂಸ್ಕರಣಾ ಸರಪಳಿಯಲ್ಲಿ ಚೀನಾದ ಹಿಡಿತವನ್ನು ಮೆಟ್ಟಿ ನಿಲ್ಲಲು ಮತ್ತು ರಾಷ್ಟ್ರೀಯ ಪ್ರಮುಖ ಖನಿಜ ಮಿಷನ್ ಅಡಿಯಲ್ಲಿ ಗುರುತಿಸಲಾದ 30 ಪ್ರಮುಖ ಖನಿಜಗಳಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿದೆ.

Category
ಕರಾವಳಿ ತರಂಗಿಣಿ