ನವದೆಹಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಶತಮಾನೋತ್ಸವ ವರ್ಷದ ಜಾಗತಿಕ ಸಂಪರ್ಕ ಕಾರ್ಯಕ್ರಮದ ಭಾಗವಾಗಿ, ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಅಮೆರಿಕದ ನ್ಯೂಯಾರ್ಕ್ ನಗರಕ್ಕೆ ಭೇಟಿ ನೀಡಿದ್ದಾರೆ. ಆ. 29ರಂದು 'ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್‌ಮೆಂಟ್ ಆಂಡ್ ಡೈಲಾಗ್' (AHEAD) ಸಂಸ್ಥೆಯು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಿದ್ದ 'ಸಾರ್ವತ್ರಿಕ ಏಕತೆ ಆಚರಣೆ' (Universal Oneness Celebration) ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ಈ ಭೇಟಿಯನ್ನು ವಿರೋಧಿಸಿ ಕೆಲವು ಸಂಘಟನೆಗಳು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದವು. ಈ ವೇಳೆ ಪ್ರತಿಭಟನಾಕಾರರು ಭಾರತದ ಹೆಮ್ಮೆಯ ತ್ರಿವರ್ಣ ಧ್ವಜವನ್ನು ಕಾಲಿನ ಅಡಿ ಹಾಕಿ ತುಳಿದು, ಹರಿದು ಹಾಕಿ ಧ್ವಜಕ್ಕೆ ಅಗೌರವ ತೋರಿರುವುದು ಕಂಡುಬಂದಿದೆ. ಈ ವಿಧ್ವಂಸಕ ಕೃತ್ಯದ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ.
ತ್ರಿವರ್ಣ ಧ್ವಜಕ್ಕೆ ಎಸಗಲಾದ ಈ ಅಪಮಾನವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪ್ರತಿಕ್ರಿಯಿಸಿರುವ ಅವರು, "ನಿಮಗೆ ಆರ್‌ಎಸ್‌ಎಸ್, ಬಿಜೆಪಿ ಅಥವಾ ಸರ್ಕಾರವನ್ನು ಟೀಕಿಸುವ ಸ್ವಾತಂತ್ರ್ಯವಿದೆ. ಆದರೆ ನಮ್ಮ ರಾಷ್ಟ್ರ ಮತ್ತು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಬೇಡಿ. ನಮ್ಮ ದೇಶ ಹಾಗೂ ಧ್ವಜವನ್ನು ಗೌರವಿಸದಿದ್ದರೆ ಅದರ ಪರಿಣಾಮ ತೀವ್ರವಾಗಿರಲಿದೆ" ಎಂದು ಪ್ರತಿಭಟನಾಕಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.