ಚೆನ್ನೈ : ತಮಿಳುನಾಡಿನ ಸಿಎಂ ಜೋಸೆಫ್ ವಿಜಯ್ ನೇತೃತ್ವದ ಟಿವಿ ಕೆ (ತಮಿಳಗ ವೆಟ್ರಿ ಕಳಗಂ) ಸರ್ಕಾರದಲ್ಲಿ ಮೈತ್ರಿ ಸಂಕಷ್ಟ ಎದುರಾಗಿದೆ. 2029ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಒಪ್ಪಿಕೊಳ್ಳದಿದ್ದರೆ ಸಂಪುಟದಿಂದ ಹೊರಬರುವುದಾಗಿ ಕಾಂಗ್ರೆಸ್ ನೇರ ಎಚ್ಚರಿಕೆ ನೀಡಿದೆ. ರಾಜ್ಯ ಪ್ರವಾಸೋದ್ಯಮ ಸಚಿವ ಹಾಗೂ ಕಾಂಗ್ರೆಸ್ ನಾಯಕ ಎಸ್. ರಾಜೇಶ್ ಕುಮಾರ್ ಅವರು ಸಿಎಂ ವಿಜಯ್ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. "2029ರ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿ ಅವರೇ ಪ್ರಧಾನಿ ಅಭ್ಯರ್ಥಿ. ಒಂದು ವೇಳೆ ಟಿವಿ ಕೆ ಇದನ್ನು ಒಪ್ಪಿಕೊಳ್ಳದಿದ್ದರೆ, ಸರ್ಕಾರದಲ್ಲಿರುವ ಕಾಂಗ್ರೆಸ್‌ನ ಇಬ್ಬರೂ ಸಚಿವರು ತಕ್ಷಣವೇ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಲಿದ್ದಾರೆ. ನಮಗೆ ಪಕ್ಷದ ಸಿದ್ಧಾಂತ ಹಾಗೂ ನಿರ್ಧಾರವೇ ಅಂತಿಮ" ಎಂದು ಅವರು ಎಚ್ಚರಿಸಿದ್ದಾರೆ. ಟಿವಿ ಕೆ ನಾಯಕರು ಹಾಗೂ ಸಚಿವರು ಸಿಎಂ ಜೋಸೆಫ್ ವಿಜಯ್ ಅವರನ್ನು 2029ರ ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್ ನಾಯಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಸಭೆಯಲ್ಲಿ ಬಹುಮತದ ಮಟ್ಟ ಕಾಯ್ದುಕೊಳ್ಳಲು ಕಾಂಗ್ರೆಸ್ ಶಾಸಕರ ಬೆಂಬಲ ಅಗತ್ಯವಾಗಿರುವುದರಿಂದ, ಮೈತ್ರಿ ಪಕ್ಷಗಳ ನಡುವಿನ ಈ ಶೀತಲ ಸಮರ ವಿಜಯ್ ನೇತೃತ್ವದ ಟಿವಿ ಕೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.