ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಜ್ಬೇಕಿಸ್ತಾನದ ಅತ್ಯುನ್ನತ ನಾಗರಿಕ ಗೌರವ 'ಒಲಿ ದರಾಜಲಿ ದೋಸ್ತ್ಲಿಕ್' ಪ್ರದಾನ ಮಾಡಿರುವ ಬೆನ್ನಲ್ಲೇ, ಎಐಎಂಐಎಂ (AIMIM) ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರು ಬಿಜೆಪಿ ಹಾಗೂ ಸಂಘ ಪರಿವಾರದ ವಿರುದ್ಧ ತೀವ್ರ ವ್ಯಂಗ್ಯವಾಡಿದ್ದಾರೆ.
ಮೊಘಲ್ ಚಕ್ರವರ್ತಿ ಬಾಬರ್ ಹುಟ್ಟಿದ ಫರ್ಘಾನಾ ಕಣಿವೆ ಇರುವುದು ಇಂದಿನ ಉಜ್ಬೇಕಿಸ್ತಾನದಲ್ಲಿದೆ. ಭಾರತದಲ್ಲಿ ರಾಜಕೀಯ ಕಾರಣಗಳಿಗಾಗಿ ವಿರೋಧ ಪಕ್ಷಗಳನ್ನು ನಿಂದಿಸಲು ಬಾಬರ್ ಹೆಸರನ್ನು ನಿರಂತರವಾಗಿ ಬಳಸುತ್ತಿದ್ದ ಬಿಜೆಪಿಗೆ, ಇದೀಗ ಅದೇ ಬಾಬರ್ ಬಂದ ದೇಶವೇ ಪ್ರಧಾನಿ ಮೋದಿಯವರನ್ನು ಕರೆದು ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ಉವೈಸಿ ಟೀಕಿಸಿದ್ದಾರೆ. "ಪ್ರಧಾನಿಯವರು ವಿದೇಶ ಪ್ರವಾಸ ಕೈಗೊಂಡಾಗಲೆಲ್ಲಾ ಪ್ರಶಸ್ತಿಗಳೊಂದಿಗೆ ಮರಳುತ್ತಾರೆ, ಅವರಿಗೆ ಅಭಿನಂದನೆಗಳು" ಎಂದು ಹೇಳಿದ ಅವರು, ಈ ಬೆಳವಣಿಗೆಯ ಕುರಿತು ಆರ್‌ಎಸ್‌ಎಸ್ ಮತ್ತು ಅದರ ಬೆಂಬಲಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಇನ್ಮುಂದೆ ಬಾಬರ್ ಹೆಸರನ್ನು ಈ ರೀತಿ ಬಳಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಧ್ಯ ಏಷ್ಯಾ ದೇಶವಾದ ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತ ಮತ್ತು ಉಜ್ಬೇಕಿಸ್ತಾನ ನಡುವಿನ ದ್ವಿಪಕ್ಷೀಯ ಬಾಂಧವ್ಯವನ್ನು ಬಲಪಡಿಸಿದ ಕೊಡುಗೆಗಾಗಿ ಅಲ್ಲಿನ ಸರ್ಕಾರವು ಈ ಗೌರವ ಪ್ರಶಸ್ತಿಯನ್ನು ನೀಡಿದೆ. ಈ ಪುರಸ್ಕಾರ ಸ್ವೀಕರಿಸಿದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಈ ಗೌರವವನ್ನು ಭಾರತ ಮತ್ತು ಉಜ್ಬೇಕಿಸ್ತಾನ ನಡುವಿನ ಶಾಶ್ವತ ಸ್ನೇಹ ಹಾಗೂ ಬಾಂಧವ್ಯಕ್ಕೆ ಅರ್ಪಿಸುವುದಾಗಿ ತಿಳಿಸಿದ್ದಾರೆ.