ಉತ್ತರ ಪ್ರದೇಶ : ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ 700ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದು, ಸಾವಿರಾರು ಮಂದಿ ನಾಪತ್ತೆಯಾಗಿದ್ದಾರೆ. ತ್ರಿಶೂಲಿ ಮತ್ತು ಭೋಟೆಕೋಶಿ ನದಿಗಳು ರೌದ್ರಾವತಾರ ತಾಳಿ ಹಲವು ಹಳ್ಳಿಗಳನ್ನು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿವೆ. ಈ ವಿನಾಶಕಾರಿ ಪ್ರವಾಹದ ತೀವ್ರ ಪರಿಣಾಮ ಭಾರತದಲ್ಲೂ ಕಂಡುಬಂದಿದ್ದು, ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ನದಿಗಳ ನೀರಿನ ಮಟ್ಟ ಅಪಾಯಕಾರಿ ಹಂತ ತಲುಪಿದೆ.
ನೇಪಾಳದಿಂದ ಹರಿದು ಬಂದ ಗಂಡಕ್ ನದಿಯಲ್ಲಿ ಉತ್ತರ ಪ್ರದೇಶದ ಗಡಿ ಜಿಲ್ಲೆಗಳಾದ ಮಹಾರಾಜಗಂಜ್ ಮತ್ತು ಖುಷಿನಗರ ಭಾಗದಲ್ಲಿ ಕಳೆದ ಎರಡು ದಿನಗಳಲ್ಲಿ 10ಕ್ಕೂ ಹೆಚ್ಚು ಮೃತದೇಹಗಳು ತೇಲಿ ಬಂದಿವೆ. ಖುಷಿನಗರದ ಖಡ್ಡಾ ಬ್ಯಾರೇಜ್ ಬಳಿ SDRF ಪಡೆಗಳು ಹಾಗೂ ಮಹಾರಾಜಗಂಜ್‌ನಲ್ಲಿ ಸಶಸ್ತ್ರ ಸೀಮಾ ಬಲ್ (SSB) ಪಡೆಗಳು ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರತೆಗೆದು ಶವಾಗಾರಕ್ಕೆ ರವಾನಿಸಿವೆ. ನದಿಯಲ್ಲಿ ಶವಗಳೊಂದಿಗೆ ವಾಹನಗಳು, ಗೃಹೋಪಯೋಗಿ ವಸ್ತುಗಳು, ಗ್ಯಾಸ್ ಸಿಲಿಂಡರ್‌ಗಳು ಮತ್ತು ಮರದ ದಿಮ್ಮಿಗಳು ಅಪಾರ ಪ್ರಮಾಣದಲ್ಲಿ ತೇಲಿಬರುತ್ತಿವೆ.
ಪ್ರವಾಹದಲ್ಲಿ ಮೃತಪಟ್ಟ ನೂರಾರು ಜನರ ದೇಹಗಳು ಛಿದ್ರಗೊಂಡಿರುವುದರಿಂದ ಗುರುತು ಪತ್ತೆ ಮಾಡುವುದು ಸರ್ಕಾರಕ್ಕೆ ಸವಾಲಾಗಿದೆ. ಹೀಗಾಗಿ ಸುಮಾರು 600 ಮಂದಿಯ ಗುರುತು ಪತ್ತೆಗಾಗಿ ನೇಪಾಳ ಸರ್ಕಾರ ಡಿಎನ್‌ಎ (DNA) ತಂತ್ರಜ್ಞಾನದ ಸಹಾಯಕ್ಕಾಗಿ ಭಾರತದ ನೆರವು ಕೋರಿದೆ. ಭಾರತೀಯ ಅಧಿಕಾರಿಗಳು ನೇಪಾಳದ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ವಿವರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇತ್ತ ಭಾರತ ಸರ್ಕಾರವು ನೇಪಾಳದ ಸಂತ್ರಸ್ತರಿಗಾಗಿ ಈಗಾಗಲೇ 4 ವಿಮಾನಗಳಲ್ಲಿ ತುರ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿ ಕಾರ್ಯಾಚರಣೆಗೆ ಬೆಂಬಲ ನೀಡಿದೆ.