ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ (ಎಫ್‌ಡಿಎ) ಅಧಿಕಾರಿಯೊಬ್ಬರಿಗೆ ಸಾರ್ವಜನಿಕರು ಅವಧಿ ಮುಗಿದ ಬಿಸ್ಕತ್‌ಗಳನ್ನು ತಿನ್ನಿಸಲು ಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ. ಸ್ಥಳೀಯ ಪಾನ್ ಅಂಗಡಿಯೊಂದರಲ್ಲಿ ಮಾರಾಟ ಮಾಡಲಾಗಿದ್ದ ಅವಧಿ ಮುಗಿದ ಖಾರವನ್ನು ಸೇವಿಸಿದ ಎರಡು ವರ್ಷದ ಮಗುವೊಂದು ದಿಢೀರ್ ಅಸ್ವಸ್ಥಗೊಂಡು, ತಲೆಸುತ್ತು ಕಾಣಿಸಿಕೊಂಡು ಆಸ್ಪತ್ರೆ ಸೇರಿತ್ತು. ಇದರಿಂದ ಆಕ್ರೋಶಗೊಂಡ ಮಗುವಿನ ಕುಟುಂಬಸ್ಥರು ಮತ್ತು ಸ್ಥಳೀಯರು ತಕ್ಷಣ ಛತ್ರಪತಿ ಸಂಭಾಜಿನಗರದ ಎಫ್‌ಡಿಎ ಕಚೇರಿಗೆ ದೂರು ನೀಡಿದ್ದರು.
ದೂರಿನ ಬೆನ್ನಲ್ಲೇ ತಪಾಸಣೆಗೆ ಆಗಮಿಸಿದ ಎಫ್‌ಡಿಎ ಅಧಿಕಾರಿಯು ಪರಿಶೀಲನೆ ನಡೆಸುವ ಮುನ್ನವೇ, ಅಸ್ವಸ್ಥತೆಗೆ ಕಾರಣವಾದ ಖಾರದ ಪ್ಯಾಕೆಟ್‌ಗಳನ್ನು ಅಂಗಡಿಯಿಂದ ತೆರವುಗೊಳಿಸಲಾಗಿತ್ತು ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಪಾಸಣೆ ವೇಳೆ ಅಂಗಡಿಯಲ್ಲಿ ಅವಧಿ ಮುಗಿದ ಹಲವು ಬಿಸ್ಕತ್ ಪ್ಯಾಕೆಟ್‌ಗಳು ಸಿಕ್ಕರೂ, ಅವುಗಳನ್ನು ಜಪ್ತಿ ಮಾಡಿದ ಅಧಿಕಾರಿಯು ಅಂಗಡಿ ಮಾಲೀಕನ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ. ಅಂಗಡಿಯವನಿಂದ ಲಂಚ ಪಡೆದು ವಿವಾದ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿದ್ದ ಜನರು ಅಧಿಕಾರಿಯನ್ನು ಸುತ್ತುವರಿದು, "ಈ ಬಿಸ್ಕತ್‌ಗಳು ಸುರಕ್ಷಿತವಾಗಿದ್ದರೆ ನೀವೇ ತಿನ್ನಿ" ಎಂದು ಸವಾಲು ಹಾಕಿ, ಅವರ ಬಾಯಿಗೆ ಬಿಸ್ಕತ್ ತುರುಕಲು ಯತ್ನಿಸಿದ್ದಾರೆ. ಈ ಇಡೀ ಘಟನೆಯ ದೃಶ್ಯಗಳು ವೀಡಿಯೊದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.