image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

₹37,700 ಕೋಟಿಯ ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒಗೆ ಸೆಬಿ ಹಸಿರು ನಿಶಾನೆ

₹37,700 ಕೋಟಿಯ ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒಗೆ ಸೆಬಿ ಹಸಿರು ನಿಶಾನೆ

ಮುಂಬೈ : ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ವಿಭಾಗವಾದ 'ಜಿಯೋ ಪ್ಲಾಟ್‌ಫಾರ್ಮ್ಸ್' (Jio Platforms) ಶೀಘ್ರದಲ್ಲೇ ಷೇರು ಮಾರುಕಟ್ಟೆ ಪ್ರವೇಶಿಸಲಿದೆ. ಸುಮಾರು 4 ಬಿಲಿಯನ್ ಡಾಲರ್ (ಅಂದಾಜು ₹37,700 ಕೋಟಿ) ಮೌಲ್ಯದ ಸಾರ್ವಜನಿಕ ಷೇರು ಕೊಡುಗೆಗೆ (IPO) ಭಾರತೀಯ ಬಂಡವಾಳ ಮಾರುಕಟ್ಟೆ ನಿಯಂತ್ರಣ ಮಂಡಳಿ (SEBI) ಅಂತಿಮ ಅನುಮೋದನೆ ನೀಡಿದ್ದು, ಇದು ಭಾರತದ ಷೇರು ಮಾರುಕಟ್ಟೆ ಇತಿಹಾಸದಲ್ಲೇ ಅತ್ಯಂತ ಬೃಹತ್ ಐಪಿಒ ಎನಿಸಿಕೊಳ್ಳಲಿದೆ.

ತನ್ನ ಕರಡು ಪ್ರಾಸ್ಪೆಕ್ಟಸ್‌ಗೆ (DRHP) ಸೆಬಿಯಿಂದ 'ವೀಕ್ಷಣಾ ಪತ್ರ' (Observation Letter) ದೊರೆತಿರುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ತಿಳಿಸಿದ್ದು, ನಿಯಮಗಳ ಪ್ರಕಾರ ಅನುಮೋದನೆ ದೊರೆತ 12 ತಿಂಗಳೊಳಗೆ ಐಪಿಒ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ₹37,700 ಕೋಟಿಗೂ ಹೆಚ್ಚಿನ ಮೊತ್ತ ಸಂಗ್ರಹಿಸುವ ಗುರಿ ಹೊಂದಿರುವ ಜಿಯೋ, 2024ರಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ($3.3 ಬಿಲಿಯನ್) ನಿರ್ಮಿಸಿದ್ದ ಸಾರ್ವಜನಿಕ ಕೊಡುಗೆಯ ದಾಖಲೆಯನ್ನು ಮುರಿಯಲಿದೆ.

ವಿಶೇಷವೆಂದರೆ, ಈ ಐಪಿಒನಲ್ಲಿ ಅಸ್ತಿತ್ವದಲ್ಲಿರುವ ಷೇರುಗಳ ಮಾರಾಟ (OFS) ಇರುವುದಿಲ್ಲ. ತಲಾ ₹10 ಮುಖಬೆಲೆಯ 27 ಕೋಟಿ ಹೊಸ ಷೇರುಗಳನ್ನು ವಿತರಿಸುವ ಮೂಲಕ ಸಂಪೂರ್ಣವಾಗಿ ಪ್ರೈಮರಿ ಷೇರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ಕಂಪನಿಯ ಈಕ್ವಿಟಿ ಶೇ. 2.9 ರಷ್ಟು ತಗ್ಗಲಿದ್ದು, ಸಂಗ್ರಹವಾಗುವ ಸಂಪೂರ್ಣ ಹಣ ಕಂಪನಿಯ ಖಾತೆಗೇ ತಲುಪಲಿದೆ. ಈ ಮೊತ್ತವನ್ನು ಪ್ರಸ್ತುತ ಇರುವ ₹27,579 ಕೋಟಿ ನಿವ್ವಳ ಸಾಲ ತೀರಿಸಲು ಹಾಗೂ ಉದ್ಯಮ ವಿಸ್ತರಣೆಗೆ ಬಳಸಿಕೊಳ್ಳಲಾಗುತ್ತದೆ.

ಲಿಸ್ಟಿಂಗ್ ನಂತರ ₹5 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದುವ ಬೃಹತ್ ಕಂಪನಿಗಳು ಆರಂಭದಲ್ಲಿ ಶೇ. 2.5 ರಷ್ಟು ಷೇರುಗಳನ್ನು ಮಾತ್ರ ನೀಡಲು ಅವಕಾಶ ಕಲ್ಪಿಸುವ ಸೆಬಿಯ ಹೊಸ ನಿಯಮದ ಲಾಭ ಜಿಯೋಗೆ ಸಿಗಲಿದೆ. 2006ರ ರಿಲಯನ್ಸ್ ಪೆಟ್ರೋಲಿಯಂ ಐಪಿಒ ನಂತರ ರಿಲಯನ್ಸ್ ಸಮೂಹದಿಂದ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಮೊದಲ ಅಧಿಕೃತ ಐಪಿಒ ಇದಾಗಿದೆ. ಪ್ರಸ್ತುತ ಕಂಪನಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಶೇ. 66.43 ರಷ್ಟು ಪ್ರಮುಖ ಪಾಲು ಹೊಂದಿದ್ದರೆ, ಉಳಿದ ಶೇ. 33.57 ರಷ್ಟು ಪಾಲು ಜಾಗತಿಕ ಹೂಡಿಕೆದಾರರ ವಶದಲ್ಲಿದೆ.

Category
ಕರಾವಳಿ ತರಂಗಿಣಿ