image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅತಿಯಾದ ಹಿಂಸೆ, ಸ್ತ್ರೀವಿರೋಧಕ್ಕೆ ಅಣ್ಣಾಮಲೈ ಆಕ್ರೋಶ

ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಅತಿಯಾದ ಹಿಂಸೆ, ಸ್ತ್ರೀವಿರೋಧಕ್ಕೆ ಅಣ್ಣಾಮಲೈ ಆಕ್ರೋಶ

ಚೆನ್ನೈ : ಆಧುನಿಕ ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾಗಳಲ್ಲಿ ಅತಿಯಾದ ಹಿಂಸೆ ಹಾಗೂ ಸ್ತ್ರೀವಿರೋಧಿ ಧೋರಣೆಗಳನ್ನು ವೈಭವೀಕರಿಸಲಾಗುತ್ತಿದೆ ಎಂದು 'ವಿ ದಿ ಲೀಡರ್ಸ್' ಸಂಸ್ಥಾಪಕ, ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ತೀವ್ರವಾಗಿ ಟೀಕಿಸಿದ್ದಾರೆ. ನಟ ಯಶ್‌ ಅಭಿನಯದ 'ಟಾಕ್ಸಿಕ್' ಸಿನಿಮಾ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಅವರು, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಸಿನಿಮಾಗಳ ಸೆನ್ಸಾರ್ ನಿಯಮಗಳು ಕಟ್ಟುನಿಟ್ಟಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಯೋಮಿತಿ ಹೊಂದಿರುವ ಸಿನಿಮಾಗಳಲ್ಲೂ ನೋಡುವುದಕ್ಕೂ ಕಷ್ಟವಾಗುವಂತಹ ಹಿಂಸಾತ್ಮಕ ದೃಶ್ಯಗಳನ್ನು ಪ್ರೇಕ್ಷಕರು ಪದೇಪದೆ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದರು.

ತಾವು ಸಿನಿಮಾಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅಣ್ಣಾಮಲೈ, ನಟ ಎಷ್ಟೇ ದೊಡ್ಡ ಸ್ಟಾರ್ ಆಗಿದ್ದರೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC) ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಆಗ್ರಹಿಸಿದರು. ಇದರೊಂದಿಗೆ, 'ಎ' ಪ್ರಮಾಣಪತ್ರ ಪಡೆದ ಸಿನಿಮಾಗಳ ಪ್ರದರ್ಶನಕ್ಕೆ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಪ್ರವೇಶಿಸದಂತೆ ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ಮಾಲಕರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪರದೆಯ ಮೇಲಿನ ಅತಿಯಾದ ಹಿಂಸೆ ಹಾಗೂ ಪುರುಷ ಪ್ರಧಾನ ವಿಚಾರಗಳು ಯುವ ಪೀಳಿಗೆಯನ್ನು ತಪ್ಪುದಾರಿಗೆಳೆಯುವ ಅಪಾಯವಿದೆ ಎಂದು ಅವರು ಎಚ್ಚರಿಸಿದ್ದಾರೆ. ಮಹಿಳೆಯರನ್ನು ಕೇವಲ ವಸ್ತುವಿನಂತೆ ಬಿಂಬಿಸುವುದು ಮತ್ತು ಒಬ್ಬ ಪುರುಷ ಒಂದೇ ಸಮಯದಲ್ಲಿ ಹಲವು ಮಹಿಳೆಯರೊಂದಿಗೆ ಸಂಬಂಧ ಹೊಂದಿರುವುದನ್ನು ವೈಭವೀಕರಿಸುವುದು ನೈಜ ಪ್ರಗತಿಪರ ಚಿಂತನೆಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು. ಸಿನಿಮಾಗಳಿಗೆ ಸಮಾಜ ಮತ್ತು ಸಂಸ್ಕೃತಿಯ ಮೇಲೆ ಅಪಾರ ಪ್ರಭಾವ ಬೀರುವ ಶಕ್ತಿಯಿರುವುದರಿಂದ, ಚಿತ್ರನಿರ್ಮಾಪಕರು ವಿಷಕಾರಿ ಮನೋಭಾವಗಳನ್ನು ಉತ್ತೇಜಿಸುವ ಬದಲು ಸಮಾಜವನ್ನು ಸಬಲಗೊಳಿಸುವ ಸಂದೇಶ ನೀಡಬೇಕು ಎಂದಿದ್ದಾರೆ. ಅಣ್ಣಾಮಲೈ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಿನಿಪ್ರಿಯರ ಒಂದು ವರ್ಗ ಹಾಗೂ ನೆಟ್ಟಿಗರು ಅವರ ಅಭಿಪ್ರಾಯಕ್ಕೆ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

Category
ಕರಾವಳಿ ತರಂಗಿಣಿ