ಉತ್ತರ ಪ್ರದೇಶ : ನೇಪಾಳದಲ್ಲಿ ಉಂಟಾಗಿರುವ ಭೀಕರ ಜಲಪ್ರಳಯದ ರಭಸಕ್ಕೆ ಸಿಲುಕಿ ಕೊಚ್ಚಿಕೊಂಡು ಬಂದಿದ್ದ ಐದು ಕಾಡಾನೆಗಳ ಹಿಂಡನ್ನು ಅರಣ್ಯ ಹಾಗೂ ನೀರಾವರಿ ಇಲಾಖೆಯ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ರಕ್ಷಿಸಿದ್ದಾರೆ. ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಕಟರ್ನಿಯಾಘಾಟ್ ಬಳಿಯಿರುವ ಗಿರ್ಜಾಪುರಿ ಬ್ಯಾರೇಜ್ ಸಮೀಪ ಈ ರೋಮಾಂಚಕ ಘಟನೆ ನಡೆದಿದೆ. ಆಗಸ್ಟ್ 25ರಂದು ಕೌದಿಯಾಲ ನದಿಯಲ್ಲಿ ಹರಿದುಬಂದ ಭಾರಿ ಪ್ರವಾಹದ ಸುಳಿಗೆ 3 ವಯಸ್ಕ ಆನೆಗಳು ಹಾಗೂ 2 ಮರಿ ಆನೆಗಳು ಸಿಲುಕಿಕೊಂಡಿದ್ದವು. ನದಿಯ ಪ್ರಚಂಡ ಹರಿವಿಗೆ ಸಣ್ಣ ಮರಿಗಳಿಗೆ ತೇಲುತ್ತಿರಲು ಸಾಧ್ಯವಾಗದೆ ಅಪಾಯಕ್ಕೆ ಸಿಲುಕಿದಾಗ, ದೊಡ್ಡ ಆನೆಗಳು ತಮ್ಮ ಜೀವದ ಹದನೋಡದೆ ಮರಿಗಳ ಸುತ್ತಲೂ ಭದ್ರವಾಗಿ ನಿಂತು ಪ್ರವಾಹದ ಜ್ವಾಲೆಯಿಂದ ಅವುಗಳನ್ನು ರಕ್ಷಿಸಲು ಅಸಾಧಾರಣ ಹೋರಾಟ ನಡೆಸಿದವು.
ಕಾಡಾನೆಗಳ ಹಿಂಡು ಬ್ಯಾರೇಜ್ ಬಳಿ ಅಪಾಯದಲ್ಲಿದ್ದುದನ್ನು ಗಮನಿಸಿದ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣವೇ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ ಗಿರ್ಜಾಪುರಿ ಬ್ಯಾರೇಜ್ ಗೇಟ್‌ಗಳನ್ನು ಮುಚ್ಚಿಸಿದರು. ಗೇಟ್‌ಗಳನ್ನು ಬಂದ್ ಮಾಡಿದ್ದರಿಂದ ನದಿಯ ನೀರಿನ ರಭಸ ಹಾಗೂ ಹರಿವಿನ ವೇಗ ತಕ್ಷಣವೇ ತಗ್ಗಿತು. ನೀರಿನ ಹರಿವು ಕಡಿಮೆಯಾಗುತ್ತಿದ್ದಂತೆ ಚೇತರಿಸಿಕೊಂಡ ಪ್ರೌಢ ಆನೆಗಳು ಮರಿಗಳನ್ನು ಸುರಕ್ಷಿತವಾಗಿ ನದಿಯ ದಂಡೆಯತ್ತ ನಡೆಸಿಕೊಂಡು ಹೋದವು. ತದನಂತರ ಅರಣ್ಯ ಸಿಬ್ಬಂದಿಯು ಇಡೀ ಆನೆಗಳ ಹಿಂಡನ್ನು ಬ್ಯಾರೇಜ್ ಪ್ರದೇಶದಿಂದ ಯಶಸ್ವಿಯಾಗಿ ಕಾಡಿನ ಕಡೆಗೆ ಕಳುಹಿಸಿಕೊಟ್ಟಿದ್ದಾರೆ. ಆಪತ್ತಿನ ಸಮಯದಲ್ಲೂ ಮರಿಗಳನ್ನು ತೊರೆಯದೆ ಕಾಯ್ದ ಆನೆಗಳ ವಾತ್ಸಲ್ಯ ಮತ್ತು ತಕ್ಷಣವೇ ಕಾರ್ಯಪ್ರವೃತ್ತರಾಗಿ ಜೀವ ಉಳಿಸಿದ ಅರಣ್ಯ ಹಾಗೂ ನೀರಾವರಿ ಇಲಾಖೆ ಸಿಬ್ಬಂದಿಯ ಸಮಯಪ್ರಜ್ಞೆಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.