image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಂಗಳೂರು ರೈಲ್ವೆ ವಲಯ ಬಿಕ್ಕಟ್ಟು: ಕೇರಳದ ಆಕ್ರೋಶ ತಣಿಸಲು ಅಧಿಕಾರಿಗಳ ಹೊಸ ಹೊಂದಾಣಿಕೆ ತಂತ್ರ

ಮಂಗಳೂರು ರೈಲ್ವೆ ವಲಯ ಬಿಕ್ಕಟ್ಟು: ಕೇರಳದ ಆಕ್ರೋಶ ತಣಿಸಲು ಅಧಿಕಾರಿಗಳ ಹೊಸ ಹೊಂದಾಣಿಕೆ ತಂತ್ರ

ಪಾಲಕ್ಕಾಡ್ : ಮಂಗಳೂರು ಮತ್ತು ಅದರ ವ್ಯಾಪ್ತಿಯ ರೈಲ್ವೆ ನಿಲ್ದಾಣಗಳನ್ನು ಪಾಲಕ್ಕಾಡ್ ವಲಯದಿಂದ ಮೈಸೂರಿನ ನೈಋತ್ಯ ರೈಲ್ವೆ ವಲಯಕ್ಕೆ ಸೇರ್ಪಡೆಗೊಳಿಸುವ ರೈಲ್ವೆ ಮಂಡಳಿಯ ನಿರ್ಧಾರ ಕೇರಳದಲ್ಲಿ ತೀವ್ರ ವಿರೋಧಕ್ಕೆ ಕಾರಣವಾದ ಬೆನ್ನಲ್ಲೇ, ಪರಿಸ್ಥಿತಿ ತಿಳಿಗೊಳಿಸಲು ಅಧಿಕಾರಿಗಳ ಮಟ್ಟದಲ್ಲಿ ಹೊಸ ಪ್ರಸ್ತಾವನೆಯೊಂದು ಚರ್ಚೆಗೆ ಬಂದಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಪಾಲಕ್ಕಾಡ್ ವಲಯದಲ್ಲೇ ಉಳಿಸಿಕೊಂಡು, ಉಳಿದ ನಿಲ್ದಾಣಗಳು ಹಾಗೂ ಆಸ್ತಿಗಳನ್ನು ಮೈಸೂರು ವಿಭಾಗಕ್ಕೆ ಬಿಟ್ಟುಕೊಡುವುದು ಈ ಹೊಂದಾಣಿಕೆ ತಂತ್ರದ ಮುಖ್ಯ ಉದ್ದೇಶವಾಗಿದೆ.

ಮಂಗಳೂರು ಸೆಂಟ್ರಲ್ ನಿಲ್ದಾಣವು ಪ್ರಮುಖ ಕೋಚಿಂಗ್ ಹಾಗೂ ರೈಲುಗಳ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿರುವುದರಿಂದ ಪಾಲಕ್ಕಾಡ್ ವಲಯಕ್ಕೆ ಇದು ಅತ್ಯಂತ ಮಹತ್ವದ ನೆಲೆಯಾಗಿದೆ. ಈ ನಿಲ್ದಾಣ ಕೈತಪ್ಪಿದರೆ ಪಾಲಕ್ಕಾಡ್ ವಲಯವು ಹೊಸದಾಗಿ ಸಮಗ್ರ ನಿರ್ವಹಣಾ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಮಂಗಳೂರು ಸೆಂಟ್ರಲ್ ನಿಲ್ದಾಣವನ್ನು ಪಾಲಕ್ಕಾಡ್‌ನಲ್ಲೇ ಉಳಿಸಿಕೊಳ್ಳುವುದು ನಿರ್ವಹಣಾ ಸಮಸ್ಯೆಗಳನ್ನು ನೀಗಿಸುವುದಲ್ಲದೆ, ಕೇರಳದ ರಾಜಕೀಯ ಪಕ್ಷಗಳ ಆಕ್ರೋಶವನ್ನು ಒಂದು ಹಂತದವರೆಗೆ ತಣ್ಣಗೆ ಮಾಡಲಿದೆ ಎಂಬುದು ಅಧಿಕಾರ ವರ್ಗದ ಲೆಕ್ಕಾಚಾರವಾಗಿದೆ.

ಪ್ರಸ್ತುತ ರೈಲ್ವೆ ಮಂಡಳಿಯ ಯೋಜನೆಯಂತೆ ಮಂಗಳೂರು ಸೆಂಟ್ರಲ್, ಮಂಗಳೂರು ಜಂಕ್ಷನ್, ಪಣಂಬೂರು ಹಾಗೂ ಉಳ್ಳಾಲ ನಿಲ್ದಾಣಗಳು ಮೈಸೂರಿನ ನೈಋತ್ಯ ರೈಲ್ವೆ ವಲಯಕ್ಕೆ ಒಳಪಡಬೇಕಿದೆ. ನೂತನ ಹೊಂದಾಣಿಕೆ ಪ್ರಸ್ತಾವನೆಯಿಂದ ಗಡಿ ನಿರ್ಧಾರ, ರೈಲ್ವೆ ಆಸ್ತಿ ಹಂಚಿಕೆ, ಸಿಬ್ಬಂದಿ ನಿಯೋಜನೆ ಹಾಗೂ ಮೈಸೂರು-ಪಾಲಕ್ಕಾಡ್ ವಲಯಗಳ ನಡುವಿನ ಸಮನ್ವಯತೆಯಂತಹ ಹಲವು ಆಡಳಿತಾತ್ಮಕ ಸವಾಲುಗಳು ಮೂಡಲಿದ್ದರೂ, ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಸಮಾಲೋಚನೆಗಳು ಮುಂದುವರಿದಿವೆ.

Category
ಕರಾವಳಿ ತರಂಗಿಣಿ