ಮುಂಬೈ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಗದು ಹಿಂಪಡೆಯುವಿಕೆಗೆ ಸಂಬಂಧಿಸಿದಂತೆ ಅಕ್ಟೋಬರ್ 1ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಇನ್ನು ಮುಂದೆ ಬ್ಯಾಂಕ್ ಗ್ರಾಹಕರು ತಿಂಗಳಿಗೆ ಗರಿಷ್ಠ 4 ಬಾರಿ ಮಾತ್ರ ಉಚಿತವಾಗಿ ನಗದು ಹಿಂಪಡೆಯಲು ಅವಕಾಶವಿರಲಿದೆ. ಈ 4 ಉಚಿತ ವಹಿವಾಟುಗಳ ಮಿತಿಯು ಬ್ಯಾಂಕ್ ಶಾಖೆ, ಎಟಿಎಂ, ಮೈಕ್ರೋ ಎಟಿಎಂ, AePS ಹಾಗೂ Cash@POS ಮೂಲಕ ನಡೆಯುವ ಎಲ್ಲಾ ನಗದು ವಹಿವಾಟುಗಳಿಗೂ ಒಟ್ಟಾಗಿ ಅನ್ವಯಿಸಲಿದೆ. ನಿಗದಿತ ಮಿತಿಯನ್ನು ಮೀರಿದರೆ ಪ್ರತಿ ಹೆಚ್ಚುವರಿ ನಗದು ವಹಿವಾಟಿಗೆ ₹15 + GST ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ, ಯುಪಿಐ (UPI), IMPS, NEFT, RTGS ಹಾಗೂ POS ಮೂಲಕ ನಡೆಸುವ ಡಿಜಿಟಲ್ ವಹಿವಾಟುಗಳು ಎಂದಿನಂತೆ ಉಚಿತವಾಗಿ ಮುಂದುವರಿಯಲಿವೆ. ಈ ಸೇವೆಗಳಿಗೆ ಯಾವುದೇ ಹೊಸ ಶುಲ್ಕ ಅನ್ವಯಿಸುವುದಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.
ಅದೇ ರೀತಿ, ಮೂಲ ಉಳಿತಾಯ ಠೇವಣಿ (BSBD) ಖಾತೆದಾರರ ಉಚಿತ RuPay ಎಟಿಎಂ ಕಾರ್ಡ್ ಹಾಗೂ ವಾರ್ಷಿಕ ಶುಲ್ಕ ರಹಿತ ಸೇವೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಅಗತ್ಯವಿಲ್ಲ ಹಾಗೂ ಅರ್ಹ ಖಾತೆದಾರರಿಗೆ ವರ್ಷಕ್ಕೆ 25 ಉಚಿತ ಚೆಕ್‌ಬುಕ್ ಲೀಫ್‌ಗಳ ಸೌಲಭ್ಯ ಲಭ್ಯವಿರಲಿದೆ. ಜೊತೆಗೆ ಸರ್ಕಾರಿ ಚೆಕ್‌ಗಳ ಡೆಪಾಸಿಟ್, ನಿಷ್ಕ್ರಿಯ ಖಾತೆ ಸಕ್ರಿಯಗೊಳಿಸುವುದು ಮತ್ತು ಖಾತೆ ಮುಚ್ಚುವ ಸೇವೆಗಳೂ ಸಂಪೂರ್ಣ ಉಚಿತವಾಗಿರಲಿವೆ.