ಆಂಧ್ರಪ್ರದೇಶ : ಆಂಧ್ರಪ್ರದೇಶದ ರಾಜಮಹೇಂದ್ರವರಂನಲ್ಲಿ ನಡೆದ ಪಂಚಾಯತ್ ರಾಜ್ ಸಹಾಯಕ ಎಂಜಿನಿಯರ್ ತಿಲ್ಲಪುಡಿ ನೂಕರಾಜು ಹಾಗೂ ಅವರ ಕುಟುಂಬದ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ರೈಫಲ್ ಶೂಟಿಂಗ್ ಕೋಚ್ ಶೇಖ್ ಸಾದಿಕ್ ಖಾನ್‌ನನ್ನು ಪೊಲೀಸರು ಉತ್ತರ ಪ್ರದೇಶದ ಮೀರತ್‌ನಲ್ಲಿ ಬಂಧಿಸಿದ್ದಾರೆ.
ಆಗಸ್ಟ್ 16 ಮತ್ತು 17 ರ ಮಧ್ಯರಾತ್ರಿ ಎಂಜಿನಿಯರ್ ತಿಲ್ಲಪುಡಿ ನೂಕರಾಜು, ಅವರ ಪತ್ನಿ ಮೀನಾ, ಮಗಳು ಸೌಜನ್ಯ ಹಾಗೂ 10 ವರ್ಷದ ಮೊಮ್ಮಗ ರಾಜಮಹೇಂದ್ರವರಂನ ರಸ್ತೆ-ಕಮ್-ರೈಲು ಸೇತುವೆಯಿಂದ ಗೋದಾವರಿ ನದಿಗೆ ಹಾರಿದ್ದರು. ಈ ವೇಳೆ ಸ್ಥಳದಲ್ಲಿದ್ದ ಮೀನುಗಾರರು ಕಾರ್ಯಾಚರಣೆ ನಡೆಸಿ 10 ವರ್ಷದ ಮೊಮ್ಮಗನನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದರೆ, ನೂಕರಾಜು, ಅವರ ಪತ್ನಿ ಹಾಗೂ ಮಗಳು ಮೃತಪಟ್ಟಿದ್ದರು.
ದೊರೆತ ಡೆತ್ ನೋಟ್ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ, ರೈಫಲ್ ಶೂಟಿಂಗ್ ಕೋಚ್ ಶೇಖ್ ಸಾದಿಕ್ ಖಾನ್ ನೀಡುತ್ತಿದ್ದ ಕಿರುಕುಳವೇ ಈ ದುರಂತಕ್ಕೆ ಕಾರಣ ಎಂಬ ಅಂಶ ಬೆಳಕಿಗೆ ಬಂದಿದೆ. ಬೇರೆ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿದ್ದು, ಕೊಲೆ ಬೆದರಿಕೆ ಹಾಗೂ ಹಣ ಸುಲಿಗೆಗೆ ಯತ್ನಿಸಿದ್ದಾಗಿ ಡೆತ್ ನೋಟ್‌ನಲ್ಲಿ ನೂಕರಾಜು ಉಲ್ಲೇಖಿಸಿದ್ದು, ಈ ಆರೋಪದಡಿ ಸಾದಿಕ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿ ಸಾದಿಕ್ ಖಾನ್, ಮೊಬೈಲ್ ಹಾಗೂ ಡಿಜಿಟಲ್ ವಹಿವಾಟುಗಳನ್ನು ಬಳಸದೆ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ. ಆತನ ಪತ್ತೆಗೆ 10ಕ್ಕೂ ಹೆಚ್ಚು ತಂಡಗಳನ್ನು ರಚಿಸಿದ್ದ ತನಿಖಾಧಿಕಾರಿಗಳು, ಐದು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಮೀರತ್‌ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಆರೋಪಿಯನ್ನು ಟ್ರಾನ್ಸಿಟ್ ವಾರಂಟ್ ಮೂಲಕ ಆಂಧ್ರಪ್ರದೇಶಕ್ಕೆ ಕರೆತರಲಾಗಿದೆ. ನೂಕರಾಜು ಅವರ ಮೊಮ್ಮಗ ವ್ಯಾಸಂಗ ಮಾಡುತ್ತಿದ್ದ ಶಾಲೆಯಲ್ಲಿ ಖಾನ್ ಶೂಟಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದುದರಿಂದ ಕಳೆದ ಎರಡು ವರ್ಷಗಳಿಂದ ಆ ಕುಟುಂಬಕ್ಕೆ ಪರಿಚಿತನಾಗಿದ್ದ ಎಂದು ಕಾಕಿನಾಡ ಜಿಲ್ಲಾ ಎಸ್ಪಿ ಬಿಂದು ಮಾಧವ್ ತಿಳಿಸಿದ್ದಾರೆ.
ಇನ್ನೊಂದೆಡೆ ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ವಿಜಯಸಾಯಿ, ಪ್ರಕರಣದಲ್ಲಿ ಅಂತರರಾಷ್ಟ್ರೀಯ ಸಂಪರ್ಕ, ಮತಾಂತರ, ಬಂದೂಕು ಪೂರೈಕೆ ಹಾಗೂ ರಾಷ್ಟ್ರವಿರೋಧಿ ಚಟುವಟಿಕೆಗಳು ಒಳಗೊಂಡಿರುವ ಶಂಕೆಯಿದ್ದು, ತನಿಖೆಯನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.