ನವದೆಹಲಿ : ದೇಶದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಆಮದು ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಸುಂಕ ದರ ಕೋಟಾ (TRQ) ಅಡಿಯಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳುವ ಕಚ್ಚಾ ಸಕ್ಕರೆಯನ್ನು ದೇಶಕ್ಕೆ ತಂದ 60 ದಿನಗಳು ಅಥವಾ ಎರಡು ತಿಂಗಳ ಒಳಗೆ ಕಡ್ಡಾಯವಾಗಿ ಸಂಸ್ಕರಿಸಿ, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕೆಂದು ಕೇಂದ್ರ ಸೂಚಿಸಿದೆ.
ಈ ಹಿಂದೆ, ಆಮದು ಮಾಡಿಕೊಂಡ ಕಚ್ಚಾ ಸಕ್ಕರೆಯನ್ನು ಸಂಸ್ಕರಿಸಿ ಮಾರುಕಟ್ಟೆಗೆ ತರಲು 2026ರ ಅಕ್ಟೋಬರ್ 31ರವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಈಗ ಪ್ರವೇಶ ಬಿಲ್ ಸಲ್ಲಿಸಿದ ದಿನಾಂಕದಿಂದ ಎರಡು ತಿಂಗಳ ಒಳಗಾಗಿ ಸಂಸ್ಕರಿಸಿ ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸುವ ಮೂಲಕ ಗಡುವನ್ನು ಸರ್ಕಾರ ಕಡಿಮೆ ಮಾಡಿದೆ. ಗೋದಾಮುಗಳಲ್ಲಿ ಸಕ್ಕರೆಯನ್ನು ದೀರ್ಘಕಾಲ ಸಂಗ್ರಹಿಸಿಟ್ಟುಕೊಳ್ಳುವುದನ್ನು ತಡೆಯುವುದು ಹಾಗೂ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ವೇಗಗೊಳಿಸುವುದು ಈ ನಿರ್ಧಾರದ ಮುಖ್ಯ ಉದ್ದೇಶವಾಗಿದೆ.
ಬೆಲೆ ಏರಿಕೆ ತಡೆಯಲು ಅಕ್ಟೋಬರ್ 31ರವರೆಗೆ 10 ಲಕ್ಷ ಟನ್ (1 ಮಿಲಿಯನ್ ಟನ್) ಕಚ್ಚಾ ಸಕ್ಕರೆ ಆಮದಿಗೆ ಸರ್ಕಾರ ಅನುಮತಿ ನೀಡಿದ್ದು, ವ್ಯಾಪಾರಿಗಳು ಹಾಗೂ ತಂಪು ಪಾನೀಯ ಮತ್ತು ಐಸ್‌ಕ್ರೀಮ್ ತಯಾರಕರಂತಹ ಬೃಹತ್ ಖರೀದಿದಾರರಿಗೆ ನಿರ್ದಿಷ್ಟ ದಾಸ್ತಾನು ಮಿತಿಯನ್ನು ವಿಧಿಸಿದೆ. ಕೃತಕ ಅಭಾವ ಸೃಷ್ಟಿ, ಅಕ್ರಮ ಸಂಗ್ರಹಣೆ ಹಾಗೂ ಕಾಳಸಂತೆಯನ್ನು ತಡೆಯಲು ಕಟ್ಟುನಿಟ್ಟಿನ ನಿಗಾವಹಿಸುವಂತೆ ರಾಜ್ಯ ಸರ್ಕಾರಗಳಿಗೂ ಸೂಚನೆ ನೀಡಲಾಗಿದೆ.
ಮತ್ತೊಂದೆಡೆ, ಸಕ್ಕರೆ ಉದ್ಯಮ ಸಂಘ (ISMA) ದೇಶದಲ್ಲಿ ಪ್ರಸ್ತುತ ಸಕ್ಕರೆಯ ಯಾವುದೇ ಕೊರತೆಯಿಲ್ಲ ಎಂದು ತಿಳಿಸಿದೆ. ಹಾಲಿ ಇರುವ ದಾಸ್ತಾನು ಮತ್ತು ಉತ್ಪಾದನೆಯು ದೇಶದ ಅಗತ್ಯವನ್ನು ಪೂರೈಸಲು ಸಾಕಷ್ಟಿದೆ. ಪ್ರಸಕ್ತ ಋತುವಿನಲ್ಲಿ ಎಥೆನಾಲ್ ಉತ್ಪಾದನೆಗೆ ಬಳಸಿದ ನಂತರ ನಿವ್ವಳ ಸಕ್ಕರೆ ಉತ್ಪಾದನೆ ಸುಮಾರು 27.9 ಮಿಲಿಯನ್ ಟನ್‌ಗಳಾಗಲಿದೆ. ಆರಂಭಿಕ ದಾಸ್ತಾನು 5 ಮಿಲಿಯನ್ ಟನ್ ಇದ್ದು, ವಾರ್ಷಿಕ ಬೇಡಿಕೆ 28 ರಿಂದ 28.5 ಮಿಲಿಯನ್ ಟನ್‌ಗಳಷ್ಟಿದೆ. ಕಬ್ಬಿನ ಬೆಳೆಗೆ ಕೀಟಬಾಧೆ ಹಾಗೂ ಅತಿಯಾದ ಮಳೆಯಿಂದ ಹೊಲಗಳು ಜಲಾವೃತಗೊಂಡಿದ್ದರಿಂದ 2025-26ರ ಉತ್ಪಾದನಾ ಅಂದಾಜನ್ನು 34.3 ಮಿಲಿಯನ್ ಟನ್‌ಗಳಿಂದ 30.6 ಮಿಲಿಯನ್ ಟನ್‌ಗಳಿಗೆ ಇಳಿಸಲಾಗಿದೆ. ಸರ್ಕಾರದ ಈ ಕ್ರಮಗಳು ಪೂರೈಕೆಯನ್ನು ಹೆಚ್ಚಿಸಿ ಶೀಘ್ರದಲ್ಲೇ ಚಿಲ್ಲರೆ ಬೆಲೆಯನ್ನು ತಗ್ಗಿಸಲಿವೆ ಎಂದು ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.