image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕ್ಷಿಪಣಿ ರಂಗದಲ್ಲಿ ಭಾರತದ ಗರ್ಜನೆ: 'ಪೃಥ್ವಿ' ನಿರ್ಮಿಸಿದ ಇತಿಹಾಸ

ಕ್ಷಿಪಣಿ ರಂಗದಲ್ಲಿ ಭಾರತದ ಗರ್ಜನೆ: 'ಪೃಥ್ವಿ' ನಿರ್ಮಿಸಿದ ಇತಿಹಾಸ

ನವದೆಹಲಿ: ಭಾರತದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಶಕೆಯನ್ನೇ ಆರಂಭಿಸಿದ 'ಪೃಥ್ವಿ' ಬ್ಯಾಲಿಸ್ಟಿಕ್ ಕ್ಷಿಪಣಿ, ದೇಶವನ್ನು ಕ್ಷಿಪಣಿ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಬಲವಾದ ಶಕ್ತಿಯಾಗಿ ಹೊರಹೊಮ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 1983ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಸರ್ಕಾರದ ಅನುಮೋದನೆಯೊಂದಿಗೆ ಚಾಲನೆ ಪಡೆದ 'ಇಂಟಿಗ್ರೇಟೆಡ್ ಗೈಡೆಡ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ' (IGMDP) ಅಡಿಯಲ್ಲಿ DRDO ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಈ ಯೋಜನೆಯಡಿ ಯಶಸ್ವಿಯಾಗಿ ರೂಪುಗೊಂಡ ಭಾರತದ ಮೊದಲ ಬ್ಯಾಲಿಸ್ಟಿಕ್ ಕ್ಷಿಪಣಿಯೇ 'ಪೃಥ್ವಿ'. ಫೆಬ್ರವರಿ 25, 1988 ರಂದು ಶ್ರೀಹರಿಕೋಟಾದಿಂದ ನಡೆದ ಪೃಥ್ವಿಯ ಮೊದಲ ಉಡಾವಣಾ ಪರೀಕ್ಷೆಯು ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಆ ಸಮಯದಲ್ಲಿ ಕೆಲವೇ ಕೆಲವು ಬಲಶಾಲಿ ದೇಶಗಳ ಬಳಿಯಿದ್ದ ಈ ಅತ್ಯಾಧುನಿಕ ತಂತ್ರಜ್ಞಾನವನ್ನು ಭಾರತ ಸ್ವದೇಶಿ ಸಾಮರ್ಥ್ಯದಿಂದ ಯಶಸ್ವಿಯಾಗಿ ಪರೀಕ್ಷಿಸಿದಾಗ ಚೀನಾ ಹಾಗೂ ಪಾಕಿಸ್ತಾನ ಸೇರಿದಂತೆ ಇಡೀ ಜಗತ್ತೇ ಆಶ್ಚರ್ಯಚಕಿತಗೊಂಡಿತು. ಈ ಯಶಸ್ಸು ಭಾರತೀಯ ವಿಜ್ಞಾನಿಗಳಿಗೆ ಕ್ಷಿಪಣಿ ವಿನ್ಯಾಸ, ಇಂಧನ ಮತ್ತು ಮಾರ್ಗದರ್ಶನ ವ್ಯವಸ್ಥೆಯ ಬಗ್ಗೆ ಆಳವಾದ ಜ್ಞಾನ ಹಾಗೂ ಆತ್ಮವಿಶ್ವಾಸವನ್ನು ನೀಡಿತು ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ. 

ಭಾರತೀಯ ಭೂಸೇನೆ, ವಾಯುಸೇನೆ ಹಾಗೂ ನೌಕಾಪಡೆ—ಮೂರೂ ಪಡೆಗಳ ಅಗತ್ಯಕ್ಕೆ ತಕ್ಕಂತೆ ಪೃಥ್ವಿ ಕ್ಷಿಪಣಿಯ ವಿಭಿನ್ನ ಆವೃತ್ತಿಗಳನ್ನು ವಿನ್ಯಾಸಗೊಳಿಸಲಾಯಿತು. ಸುಧಾರಿತ ಜಡತ್ವ ಸಂಚರಣೆ ವ್ಯವಸ್ಥೆ (INS) ಹೊಂದಿದ್ದ ಈ ಕ್ಷಿಪಣಿಯು ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ನಿಖರವಾಗಿ ಗುರಿ ತಲುಪುವ ಸಾಮರ್ಥ್ಯ ಹೊಂದಿತ್ತು. 'ಟ್ರಾನ್ಸ್‌ಪೋರ್ಟರ್-ಎರೆಕ್ಟರ್-ಲಾಂಚರ್' (TEL) ಎಂಬ ಮೊಬೈಲ್ ಲಾಂಚರ್ ಬಳಸಿ ಇದನ್ನು ರಸ್ತೆ ಮಾರ್ಗದ ಮೂಲಕ ಸುಲಭವಾಗಿ ಕೊಂಡೊಯ್ಯಲು ಸಾಧ್ಯವಾಗಿದ್ದು, ರಕ್ಷಣಾ ಕಾರ್ಯತಂತ್ರಕ್ಕೆ ಹೆಚ್ಚಿನ ಬಲ ತಂದುಕೊಟ್ಟಿತು. ಆರಂಭಿಕ ದಿನಗಳಲ್ಲಿ ಬಳಸಲಾಗುತ್ತಿದ್ದ ದ್ರವ ಇಂಧನದ ಸವಾಲುಗಳನ್ನು ಮೆಟ್ಟಿ ನಿಲ್ಲಲು, ಮುಂದೆ ಅಗ್ನಿ ಕ್ಷಿಪಣಿಗಳಿಗಾಗಿ ಘನ ಇಂಧನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಪೃಥ್ವಿಯ ಅನುಭವವೇ ದಾರಿದೀಪವಾಯಿತು. ಇಂದು ಪೃಥ್ವಿಯ ಆರಂಭಿಕ ಆವೃತ್ತಿಗಳು ಸೇವೆಯಿಂದ ನಿವೃತ್ತಿಯಾಗಿದ್ದರೂ, ಭಾರತವನ್ನು ಕ್ಷಿಪಣಿ ಕ್ಷೇತ್ರದಲ್ಲಿ ಸೂಪರ್ ಪವರ್ ಮಾಡಿದ ಕೀರ್ತಿಯೊಂದಿಗೆ ಅಗ್ನಿ, ಆಕಾಶ್, ತ್ರಿಶೂಲ್, ನಾಗ್ ಮತ್ತು ಬ್ರಹ್ಮೋಸ್‌ನಂತಹ ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳ ನಿರ್ಮಾಣಕ್ಕೆ ಇದು ಬಲವಾದ ತಡಿಪಾಯ ಹಾಕಿಕೊಟ್ಟಿದೆ.

Category
ಕರಾವಳಿ ತರಂಗಿಣಿ