image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 8.23 ಲಕ್ಷ ಹುದ್ದೆಗಳು ಖಾಲಿ: ಆರ್‌ಟಿಐ ಬಹಿರಂಗ

ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 8.23 ಲಕ್ಷ ಹುದ್ದೆಗಳು ಖಾಲಿ: ಆರ್‌ಟಿಐ ಬಹಿರಂಗ

ನವದೆಹಲಿ : ಕೇಂದ್ರ ಸರ್ಕಾರದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿ ಮಂಜೂರಾದ ಒಟ್ಟು ಹುದ್ದೆಗಳ ಪೈಕಿ ಶೇಕಡಾ 21 ರಷ್ಟು ಹುದ್ದೆಗಳು ಭರ್ತಿಯಾಗದೆ ಖಾಲಿಯುಳಿದಿವೆ ಎಂಬ ಆಘಾತಕಾರಿ ಅಂಶ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಬಹಿರಂಗವಾಗಿದೆ. ಮಧ್ಯಪ್ರದೇಶದ ನೀಮಚ್ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ್ದ ಅರ್ಜಿಗೆ ಕೇಂದ್ರ ಸರ್ಕಾರ ನೀಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಮಾರ್ಚ್ 1, 2024 ರ ವೇಳೆಗೆ ಸಾರ್ವಜನಿಕ ವಲಯದ ಉದ್ದಿಮೆಗಳನ್ನು (ಪಿಎಸ್‌ಯು) ಹೊರತುಪಡಿಸಿ ಒಟ್ಟು 39,23,212 ಮಂಜೂರಾದ ಹುದ್ದೆಗಳಿವೆ. ಆದರೆ ಪ್ರಸ್ತುತ ಕೇವಲ 30,99,556 ನೌಕರರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಬರೋಬ್ಬರಿ 8,23,656 ಹುದ್ದೆಗಳು ಖಾಲಿಯಾಗಿವೆ.

ದೇಶದ ಅತ್ಯುನ್ನತ ಸಾಂವಿಧಾನಿಕ ಕಚೇರಿಗಳು ಹಾಗೂ ಆಡಳಿತ ಕೇಂದ್ರಗಳಲ್ಲೂ ಸಿಬ್ಬಂದಿ ಕೊರತೆ ತೀವ್ರವಾಗಿದೆ. ರಾಷ್ಟ್ರಪತಿ ಸಚಿವಾಲಯದಲ್ಲಿ ಮಂಜೂರಾದ 803 ಹುದ್ದೆಗಳ ಪೈಕಿ 287 (ಶೇ. 35.74) ಹಾಗೂ ಪ್ರಧಾನಮಂತ್ರಿ ಕಾರ್ಯಾಲಯದಲ್ಲಿ (ಪಿಎಂಒ) ಮಂಜೂರಾದ 441 ಹುದ್ದೆಗಳಲ್ಲಿ 126 (ಶೇ. 28.57) ಸ್ಥಾನಗಳು ಭರ್ತಿಯಾಗಿಲ್ಲ. ಇನ್ನು ದೇಶದ ಆಂತರಿಕ ಭದ್ರತೆ ನೋಡಿಕೊಳ್ಳುವ ಗೃಹ ಸಚಿವಾಲಯದಲ್ಲಿ ಮಂಜೂರಾದ 11,18,233 ಹುದ್ದೆಗಳ ಪೈಕಿ 1,10,885 ಹುದ್ದೆಗಳು ಖಾಲಿಯಿವೆ. ಒಟ್ಟು ಖಾಲಿ ಇರುವ ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪಾಲು ರಕ್ಷಣೆ ಮತ್ತು ರೈಲ್ವೆ ಇಲಾಖೆಯಲ್ಲೇ ಇರುವುದು ಬೆಳಕಿಗೆ ಬಂದಿದೆ. ರಕ್ಷಣಾ ಸಚಿವಾಲಯದ ಸಿವಿಲಿಯನ್ ವಿಭಾಗದಲ್ಲಿ 5,56,248 ಹುದ್ದೆಗಳ ಪೈಕಿ 2,42,243 (ಶೇ. 43.5) ಸ್ಥಾನಗಳು ಭರ್ತಿಯಾಗಿಲ್ಲ. ಇನ್ನು ಭಾರತೀಯ ರೈಲ್ವೆ ಇಲಾಖೆಯಲ್ಲಿ ಮಂಜೂರಾದ 14,79,701 ಹುದ್ದೆಗಳಲ್ಲಿ 2,40,125 ಹುದ್ದೆಗಳು ಖಾಲಿಯಾಗಿವೆ. ಈ ಎರಡು ಇಲಾಖೆಗಳಲ್ಲೇ ಒಟ್ಟು 4.82 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿಯಿರುವುದು ದಿನನಿತ್ಯದ ಕಾರ್ಯವೈಖರಿಯ ಮೇಲೆ ತೀವ್ರ ಒತ್ತಡ ಸೃಷ್ಟಿಸಿದೆ. ಇದಲ್ಲದೆ ಅಂಚೆ ಇಲಾಖೆಯಲ್ಲಿ 61,546 ಹಾಗೂ ಕಂದಾಯ ಇಲಾಖೆಯಲ್ಲಿ 69,662 (ಶೇ. 39) ಹುದ್ದೆಗಳು ಭರ್ತಿಯಾಗಬೇಕಿದೆ.

ದೇಶದ ಆರ್ಥಿಕ, ವೈಜ್ಞಾನಿಕ ಹಾಗೂ ಸಾಮಾಜಿಕ ಪ್ರಗತಿಗೆ ಪೂರಕವಾಗಿರುವ ಇಲಾಖೆಗಳಲ್ಲೂ ಈ ಅಭಾವ ಮುಂದುವರಿದಿದೆ. ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಲ್ಲಿ ಶೇ. 34 (1,855) ಹಾಗೂ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆಯಲ್ಲಿ ಶೇ. 58 (1,378) ಹುದ್ದೆಗಳು ಖಾಲಿಯಿವೆ. ಪರಿಸರ ಸಚಿವಾಲಯದಲ್ಲಿ ಶೇ. 38 ಮತ್ತು ಕಾರ್ಮಿಕ-ಉದ್ಯೋಗ ಸಚಿವಾಲಯದಲ್ಲಿ ಶೇ. 41 ಕ್ಕೂ ಹೆಚ್ಚು ಹುದ್ದೆಗಳು ಭರ್ತಿಯಾಗಿಲ್ಲ. ಪ್ರಮುಖ ವೈಜ್ಞಾನಿಕ ವಿಭಾಗಗಳಾದ ಪರಮಾಣು ಶಕ್ತಿ ಇಲಾಖೆಯಲ್ಲಿ 10,234 ಹಾಗೂ ಇಸ್ರೋ ಒಳಗೊಂಡ ಬಾಹ್ಯಾಕಾಶ ಇಲಾಖೆಯಲ್ಲಿ 4,126 ಹುದ್ದೆಗಳು ಖಾಲಿಯಿವೆ. ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಆಯುಷ್ ಸಚಿವಾಲಯ ಹಾಗೂ ಆರೋಗ್ಯ ಸಂಶೋಧನಾ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳು ಭರ್ತಿಯಾಗದೆ ಉಳಿದಿರುವುದು ಕಳವಳಕಾರಿ ಸಂಗತಿಯಾಗಿದೆ.

Category
ಕರಾವಳಿ ತರಂಗಿಣಿ