image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ರಾಮಜನ್ಮಭೂಮಿ ತೀರ್ಪು ಮತ್ತು ದೈವಿಕ ರಹಸ್ಯ: ನ್ಯಾಯಮೂರ್ತಿ ಕೆ.ಎಂ. ಪಾಂಡೆ ಆತ್ಮಚರಿತ್ರೆಯ ರೋಚಕ ಸಂಗತಿಗಳು

ರಾಮಜನ್ಮಭೂಮಿ ತೀರ್ಪು ಮತ್ತು ದೈವಿಕ ರಹಸ್ಯ: ನ್ಯಾಯಮೂರ್ತಿ ಕೆ.ಎಂ. ಪಾಂಡೆ ಆತ್ಮಚರಿತ್ರೆಯ ರೋಚಕ ಸಂಗತಿಗಳು

ಅಯೋಧ್ಯ : ಅಯೋಧ್ಯೆಯ ಭವ್ಯ ರಾಮಮಂದಿರ ನಿರ್ಮಾಣದ ಹಿಂದೆ ಶತಮಾನಗಳ ಹೋರಾಟ ಹಾಗೂ ಕೋಟ್ಯಂತರ ಭಕ್ತರ ತ್ಯಾಗವಿದೆ. ಈ ಐತಿಹಾಸಿಕ ಪಯಣದಲ್ಲಿ 1986ರ ಫೆಬ್ರುವರಿ 1ರಂದು ಫೈಜಾಬಾದ್ ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪು ಅತ್ಯಂತ ಮಹತ್ವದ ತಿರುವು ನೀಡಿತು. ವಿವಾದಿತ ಸ್ಥಳದಲ್ಲಿದ್ದ ಬೀಗಗಳನ್ನು ತೆರೆದು ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಿದ ಅಂದಿನ ಜಿಲ್ಲಾ ನ್ಯಾಯಮೂರ್ತಿ ಕೃಷ್ಣ ಮೋಹನ್ ಪಾಂಡೆ, ಆ ದಿನ ನಡೆದ ರೋಚಕ ಹಾಗೂ ದೈವಿಕ ಘಟನೆಯನ್ನು 1991ರಲ್ಲಿ ಪ್ರಕಟವಾದ ತಮ್ಮ Voice of Conscience (ಆತ್ಮಸಾಕ್ಷಿಯ ಧ್ವನಿ) ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಾರೆ.

ನ್ಯಾಯಮೂರ್ತಿ ಪಾಂಡೆ ಅವರ ವಿವರಣೆಯಂತೆ, ಬೀಗ ತೆರೆಯುವ ಆದೇಶ ಹೊರಡಿಸಿದ ದಿನದಂದು ಕಪ್ಪು ಬಣ್ಣದ ಕೋತಿಯೊಂದು ನ್ಯಾಯಾಲಯದ ಛಾವಣಿಯ ಮೇಲಿದ್ದ ಧ್ವಜಸ್ತಂಭವನ್ನು ಹಿಡಿದು ಇಡೀ ದಿನ ಕುಳಿತಿತ್ತು. ಅಂತಿಮ ಆದೇಶ ಆಲಿಸಲು ನೆರೆದಿದ್ದ ಸಾವಿರಾರು ಜನರು ಆ ಕೋತಿಗೆ ಹಣ್ಣು ಹಾಗೂ ನೆಲಗಡಲೆಗಳನ್ನು ನೀಡಿದರೂ ಅದು ಯಾವುದನ್ನೂ ಮುಟ್ಟಲಿಲ್ಲ. ಸಂಜೆ 4:40ಕ್ಕೆ ಅಂತಿಮ ತೀರ್ಪು ಹೊರಬಿದ್ದ ತಕ್ಷಣವೇ ಆ ಕೋತಿ ಅಲ್ಲಿಂದ ತೆರಳಿತು. ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಎಸ್‌ಪಿ) ನ್ಯಾಯಮೂರ್ತಿಗಳನ್ನು ಅವರ ಬಂಗಲೆಗೆ ಕರೆದೊಯ್ದಾಗ, ಅದೇ ಕೋತಿ ಅವರ ಮನೆ ವರಾಂಡದಲ್ಲಿ ಕುಳಿತಿತ್ತು. ಇದನ್ನು ಕಂಡು ಆಶ್ಚರ್ಯಚಕಿತರಾದ ನ್ಯಾಯಮೂರ್ತಿಗಳು, ಅದನ್ನು ಯಾವುದೋ ದೈವಿಕ ಶಕ್ತಿಯ ಉಪಸ್ಥಿತಿ ಎಂದು ಪರಿಗಣಿಸಿ ಕೈಜೋಡಿಸಿ ನಮಸ್ಕರಿಸಿದ್ದರು.

ಈ ಐತಿಹಾಸಿಕ ತೀರ್ಪಿನ ಬಳಿಕ ನ್ಯಾಯಮೂರ್ತಿ ಪಾಂಡೆ ಅವರು ತೀವ್ರ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಪಾಕಿಸ್ತಾನದಿಂದ ಬೆದರಿಕೆ ಕರೆಗಳು ಬಂದಿದ್ದಲ್ಲದೆ, ಅಂದಿನ ಮುಲಾಯಂ ಸಿಂಗ್ ಯಾದವ್ ನೇತೃತ್ವದ ಉತ್ತರ ಪ್ರದೇಶ ರಾಜ್ಯ ಸರ್ಕಾರವು ಅವರ ಹುದ್ದೆಯ ಬಡ್ತಿಯನ್ನು ತಡೆಹಿಡಿಯಿತು. ನ್ಯಾಯಯುತ ಬಡ್ತಿ ಪಡೆಯಲು ಅವರು ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಇದರ ಜೊತೆಗೆ, ತಮ್ಮ ಮಗಳಿಗೂ ತರಗತಿಯಲ್ಲಿ ನಿರ್ದಿಷ್ಟ ಸಮುದಾಯದ ಸದಸ್ಯರಿಂದ ಕಿರುಕುಳ ಎದುರಾಗಿತ್ತು ಎಂದು ಅವರು ಉಲ್ಲೇಖಿಸಿದ್ದಾರೆ.

ಈ ಪ್ರಕರಣದ ಹಿನ್ನೆಲೆ ಕುರಿತು ಮಾತನಾಡಿದ ಅವರ ಸೋದರಳಿಯ ಸುಜಿತ್ ಪಾಂಡೆ, ನ್ಯಾಯಮೂರ್ತಿಗಳು ಈ ಪ್ರಕರಣಕ್ಕಾಗಿ ಸುಮಾರು ಆರು ತಿಂಗಳ ಕಾಲ ಪ್ರತಿದಿನ 8 ಗಂಟೆಗಳ ಕಾಲ ತೀವ್ರ ಸಂಶೋಧನೆ ನಡೆಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಜ್ಯೋತಿಷಿ ಪ್ರೊಫೆಸರ್ ಕುನ್ನೆ ಅವರು ಮುಂಚಿತವಾಗಿಯೇ ಭವಿಷ್ಯ ನುಡಿದು, "ನಿಮ್ಮನ್ನು ಸಣ್ಣ ಜಿಲ್ಲೆಗೆ ವರ್ಗಾಯಿಸಲಾಗುತ್ತದೆ, ವರ್ಗಾವಣೆಯ ನಂತರ ನೀವು ಪಡೆಯುವ ಖ್ಯಾತಿಯನ್ನು ನಿರಾಕರಿಸಬೇಡಿ" ಎಂದು ಹೇಳಿದ್ದರು. ಅದರಂತೆ ಫೈಜಾಬಾದ್‌ಗೆ ವರ್ಗಾವಣೆಯಾಗಿ ಅಯೋಧ್ಯೆ ಪ್ರಕರಣ ಕೈಗೆ ಬಂದಾಗ ಜ್ಯೋತಿಷಿಯ ಮಾತು ನಿಜವಾಯಿತೆಂದು ತಿಳಿದು, ಅವರು ಹಗಲಿರುಳು ಶ್ರಮಿಸಿ ಈ ನಿರ್ಣಾಯಕ ತೀರ್ಪು ನೀಡಿದ್ದರು.

Category
ಕರಾವಳಿ ತರಂಗಿಣಿ