ಚೆನ್ನೈ : ತಮಿಳುನಾಡು ಸರ್ಕಾರದ ಮಹತ್ವಾಕಾಂಕ್ಷೆಯ 'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಯೋಜನೆಯಡಿ ನವಜಾತ ಶಿಶುಗಳಿಗೆ 1 ಗ್ರಾಂ ತೂಕದ 22 ಕ್ಯಾರಟ್ ಚಿನ್ನದ ಉಂಗುರ ವಿತರಿಸುವ ಬೃಹತ್ ಟೆಂಡರ್‌ನಲ್ಲಿ ಪ್ರಮುಖ ಜ್ಯುವೆಲ್ಲರಿ ಸಂಸ್ಥೆ ಜೋಯಾಲುಕ್ಕಾಸ್ ಅಚ್ಚರಿಯ ಬಿಡ್ ಸಲ್ಲಿಸಿ ಗಮನ ಸೆಳೆದಿದೆ. ಬರೋಬ್ಬರಿ 755 ಕೋಟಿ ರೂಪಾಯಿ ಅಂದಾಜು ಮೌಲ್ಯದ ಈ ಯೋಜನೆಯಲ್ಲಿ, ಉಂಗುರ ತಯಾರಿಕೆ, ವಿಮೆ, ಸಾಗಾಣಿಕೆ ಹಾಗೂ ಬಿಐಎಸ್ ಹಾಲ್‌ಮಾರ್ಕಿಂಗ್ ಒಳಗೊಂಡಂತೆ ಪ್ರತಿ ಉಂಗುರಕ್ಕೆ ಕೇವಲ 1 ಪೈಸೆ (0.01 ರೂ.) ಸೇವಾ ಶುಲ್ಕ ವಿಧಿಸುವ ಮೂಲಕ ಸಂಸ್ಥೆಯು ಅತಿ ಕಡಿಮೆ ದರ ನಮೂದಿಸಿದ (L1) ಬಿಡ್‌ದಾರರಾಗಿ ಹೊರಹೊಮ್ಮಿದೆ.
ತಮಿಳುನಾಡು ವೈದ್ಯಕೀಯ ಸೇವೆಗಳ ನಿಗಮ (TNMSC) ಅನುಷ್ಠಾನಗೊಳಿಸುತ್ತಿರುವ ಈ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಒಟ್ಟು 4,41,667 ನವಜಾತ ಶಿಶುಗಳಿಗೆ ಉಚಿತವಾಗಿ ಚಿನ್ನದ ಉಂಗುರಗಳನ್ನು ನೀಡಲಾಗುತ್ತಿದ್ದು, ಪ್ರತಿಯೊಂದು ಉಂಗುರದ ಮೇಲೆಯೂ ರಾಜ್ಯ ಸರ್ಕಾರದ ಅಧಿಕೃತ ಲಾಂಛನ ಹಾಗೂ ಮುಖ್ಯಮಂತ್ರಿಗಳ ಚಿತ್ರ ಕೆತ್ತಿರಬೇಕಾಗುತ್ತದೆ. ಈ ಟೆಂಡರ್ ಪ್ರಕ್ರಿಯೆಯಲ್ಲಿ ಜಿಆರ್‌ಟಿ ಜ್ಯುವೆಲ್ಲರ್ಸ್ (410.97 ರೂ.) ಮತ್ತು ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ (822.97 ರೂ.) ಸೇರಿದಂತೆ ಒಟ್ಟು 11 ಪ್ರಮುಖ ಸಂಸ್ಥೆಗಳು ಭಾಗವಹಿಸಿದ್ದವು. ರಾಜ್ಯ ಟೆಂಡರ್ ಪಾರದರ್ಶಕತೆ ಕಾಯ್ದೆಯನ್ವಯ ಅತಿ ಕಡಿಮೆ ಬಿಡ್ ದರಕ್ಕೆ ಕಾರ್ಯನಿರ್ವಹಿಸಲು ಸಮ್ಮತಿಸಿದ ಕಲ್ಯಾಣ್ ಜ್ಯುವೆಲ್ಲರ್ಸ್‌ಗೆ ಶೇ. 30 ರಷ್ಟು ಕಾಂಟ್ರಾಕ್ಟ್ ಹಂಚಿಕೆ ಮಾಡಲಾಗಿದ್ದು, ಉಳಿದ ಶೇ. 70 ರಷ್ಟು ಭಾಗವನ್ನು ಜೋಯಾಲುಕ್ಕಾಸ್‌ಗೆ ನೀಡಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಜೋಯಾಲುಕ್ಕಾಸ್ ಸಂಸ್ಥೆಯ ಅಧ್ಯಕ್ಷ ಜೋಯ್ ಆಲುಕ್ಕಾಸ್, ತಾವು ಯಾವುದೇ ವಾಣಿಜ್ಯ ಲಾಭದ ಉದ್ದೇಶದಿಂದ ಈ ನಿರ್ಧಾರ ತಳೆದಿಲ್ಲ ಹಾಗೂ ಸರ್ಕಾರದ ಜನಕಲ್ಯಾಣ ಕಾರ್ಯಕ್ರಮಕ್ಕೆ ಬೆಂಬಲ ನೀಡುವ ಬದ್ಧತೆಯಿಂದ ಕನಿಷ್ಠ ಲಾಭಾಂಶದ ಆಧಾರದಲ್ಲಿ ಈ ಸೇವೆ ಒದಗಿಸುತ್ತಿರುವುದಾಗಿ ತಿಳಿಸಿದ್ದಾರೆ. ಆದಾಗ್ಯೂ, ಈ 1 ಪೈಸೆಯ ಬಿಡ್ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ವಿರೋಧ ಪಕ್ಷ AIADMK ಸಂಸ್ಥೆಯ ಬಿಡ್ ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿದೆ. ಯೋಜನೆಯ ನಿಯಮಾವಳಿಗಳ ಪ್ರಕಾರ, ಸರಬರಾಜು ಮಾಡಿದ ಉಂಗುರಗಳ ಬ್ಯಾಚ್ ಗುಣಮಟ್ಟ ಪರಿಶೀಲನೆಯಲ್ಲಿ ವಿಫಲವಾದರೆ ಶೇ. 10 ರಷ್ಟು ದಂಡ ವಿಧಿಸುವುದರ ಜೊತೆಗೆ ಆ ಉಂಗುರಗಳನ್ನು ಚಾಲ್ತಿ ಮಾರುಕಟ್ಟೆ ದರದಲ್ಲಿ ಕಂಪನಿಯೇ ಕಡ್ಡಾಯವಾಗಿ ಮರುಖರೀದಿಸುವ ಕಠಿಣ ಷರತ್ತನ್ನು ವಿಧಿಸಲಾಗಿದೆ.