image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಸಿಂಧೂ ನದಿ ನೀರು ಸದ್ಬಳಕೆ: ಲಡಾಖ್ ಆಡಳಿತಕ್ಕೆ ಶಶಿ ತರೂರ್ ಶ್ಲಾಘನೆ

ಸಿಂಧೂ ನದಿ ನೀರು ಸದ್ಬಳಕೆ: ಲಡಾಖ್ ಆಡಳಿತಕ್ಕೆ ಶಶಿ ತರೂರ್ ಶ್ಲಾಘನೆ

ನವದೆಹಲಿ : ಸಿಂಧೂ ನದಿಗೆ ವ್ಯರ್ಥವಾಗಿ ಹರಿದು ಪಾಕಿಸ್ತಾನದತ್ತ ಸಾಗುತ್ತಿದ್ದ ಹಿಮನದಿಯ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಲಡಾಖ್ ಆಡಳಿತವು ಮಹತ್ವದ ಸಾಧನೆ ಮಾಡಿದೆ. ಪ್ರತಿದಿನ ನದಿಯನ್ನು ಸೇರಿ ಪೋಲಾಗುತ್ತಿದ್ದ ಸುಮಾರು ೯ ಕೋಟಿ ಲೀಟರ್ ಹಿಮನದಿಯ ನೀರನ್ನು ಲಡಾಖ್ ಆಡಳಿತವು ಇದೀಗ ಕೇವಲ ೫೦ ಲಕ್ಷ ಲೀಟರ್‌ಗೆ ತಗ್ಗಿಸಿದೆ.

ಲಡಾಖ್‌ನ ಉಪರಾಜ್ಯಪಾಲ ವಿನಯ್ ಕುಮಾರ್ ಸಕ್ಸೇನಾ ಅವರ ನೇತೃತ್ವದಲ್ಲಿ, ಸ್ಟೋಕ್ ಗ್ಲೇಷಿಯರ್‌ನ ನೀರನ್ನು ಇಗೂ-ಫೇ ನೀರಾವರಿ ಕಾಲುವೆ ಹಾಗೂ ಚುಚೋಟ್ ಗ್ರಾಮದ ಕಾಲುವೆಯತ್ತ ಯಶಸ್ವಿಯಾಗಿ ತಿರುಗಿಸಲಾಗಿದೆ. ಯಾವುದೇ ಬೃಹತ್ ಬಂಡವಾಳ ವೆಚ್ಚವಿಲ್ಲದೆ, ಕೇವಲ ಸರಳ ಮಣ್ಣಿನ ಕಾಮಗಾರಿಯ ಮೂಲಕವೇ ಈ ಯೋಜನೆ ಅನುಷ್ಠಾನಗೊಂಡಿದೆ. ಇದರಿಂದಾಗಿ ದಶಕಗಳಿಂದ ನೀರಿಲ್ಲದೆ ಒಣಗಿದ್ದ ೪೩ ಕಿಲೋಮೀಟರ್ ಉದ್ದದ ಇಗೂ-ಫೇ ಕಾಲುವೆಯಲ್ಲಿ ಮತ್ತೆ ನೀರು ಹರಿಯಲು ಪ್ರಾರಂಭಿಸಿದ್ದು, ೧೨ ಗ್ರಾಮಗಳ ಸುಮಾರು ೧,೦೦೦ ಎಕರೆಗೂ ಅಧಿಕ ಬಂಜರು ಭೂಮಿಗೆ ಕೃಷಿ ಸಂಜೀವಿನಿ ಲಭಿಸಿದೆ.

ಪಕ್ಷಭೇದ ಮರೆತು ಈ ಮಹತ್ಕಾರ್ಯವನ್ನು ವಿದೇಶಾಂಗ ವ್ಯವಹಾರಗಳ ಸಂಸದೀಯ ಸಮಿತಿಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ಶಶಿ ತರೂರ್ ಮುಕ್ತವಾಗಿ ಪ್ರಶಂಸಿದ್ದಾರೆ. 'ಎಕ್ಸ್' ವೇದಿಕೆಯಲ್ಲಿ ಉಪರಾಜ್ಯಪಾಲರ ಕಾರ್ಯವನ್ನು ಅಭಿನಂದಿಸಿರುವ ಅವರು, ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿ ಲಡಾಖ್ ಆಡಳಿತದ ಈ ಯೋಜನೆ ಇಡೀ ದೇಶಕ್ಕೇ ಮಾದರಿಯಾಗುವ ಸಾಮರ್ಥ್ಯ ಹೊಂದಿದೆ ಎಂದು ಬಣ್ಣಿಸಿದ್ದಾರೆ.

Category
ಕರಾವಳಿ ತರಂಗಿಣಿ