image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಮಂಗಳೂರು ರೈಲ್ವೆ ವಲಯ ಮೈಸೂರು ವಿಭಾಗಕ್ಕೆ ಸೇರ್ಪಡೆ: ಕೇಂದ್ರದ ನಿರ್ಧಾರಕ್ಕೆ ಕೇರಳ ತೀವ್ರ ವಿರೋಧ

ಮಂಗಳೂರು ರೈಲ್ವೆ ವಲಯ ಮೈಸೂರು ವಿಭಾಗಕ್ಕೆ ಸೇರ್ಪಡೆ: ಕೇಂದ್ರದ ನಿರ್ಧಾರಕ್ಕೆ ಕೇರಳ ತೀವ್ರ ವಿರೋಧ

ತಿರುವನಂತಪುರಂ : ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ಏಕಪಕ್ಷೀಯ ಎಂದು ಕೇರಳ ನಾಯಕ ವಿ.ಡಿ. ಸತೀಶನ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಈ ನಿರ್ಧಾರವನ್ನು ತಕ್ಷಣವೇ ಮರುಪರಿಶೀಲಿಸುವಂತೆ ಆಗ್ರಹಿಸಿ ಪ್ರಧಾನಮಂತ್ರಿ ಹಾಗೂ ಕೇಂದ್ರ ರೈಲ್ವೆ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿರುವ ಅವರು, ರಾಜ್ಯದ ಎಲ್ಲಾ ಸಂಸದರನ್ನು ಒಗ್ಗೂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.

ರೈಲ್ವೆ ಸಚಿವಾಲಯ ಹೊರಡಿಸಿರುವ ನೂತನ ಆದೇಶದ ಪ್ರಕಾರ, ಉಳ್ಳಾಲದಿಂದ ಮಂಗಳೂರುವರೆಗಿನ ಪ್ರದೇಶಗಳು ಹಾಗೂ ಅತಿ ಹೆಚ್ಚು ಆದಾಯ ತಂದುಕೊಡುವ ಪಣಂಬೂರು ಮತ್ತು ಮಂಗಳೂರು ಜಂಕ್ಷನ್ ಸೇರಿದಂತೆ ಪ್ರಮುಖ ನಿಲ್ದಾಣಗಳು ಮೈಸೂರು ವಿಭಾಗದ ವ್ಯಾಪ್ತಿಗೆ ವರ್ಗಾವಣೆಯಾಗಲಿವೆ. ಇದರಿಂದ ದಕ್ಷಿಣ ರೈಲ್ವೆ ಹಾಗೂ ಪಾಲಕ್ಕಾಡ್ ವಿಭಾಗದ ಆದಾಯಕ್ಕೆ ಭಾರಿ ಹೊಡೆತ ಬೀಳಲಿದ್ದು, ವಿಭಾಗದ ಅಭಿವೃದ್ಧಿಯ ಮೇಲೆಯೂ ಗಂಭೀರ ಪರಿಣಾಮ ಬೀರಲಿದೆ ಎಂಬುದು ಕೇರಳದ ಮುಖ್ಯ ಆತಂಕವಾಗಿದೆ.

ಈ ನಿರ್ಧಾರವನ್ನು ಕೈಗೊಳ್ಳುವ ಮುನ್ನ ರೈಲ್ವೆ ಸಚಿವಾಲಯವು ಕೇರಳ ಸರ್ಕಾರದ ಗಮನಕ್ಕೆ ತಂದಿಲ್ಲ ಅಥವಾ ಯಾವುದೇ ರೀತಿಯ ಸಮಾಲೋಚನೆ ನಡೆಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದೆ. ಸಂಸದರಾದ ವಿ.ಕೆ. ಶ್ರೀಕಂಠನ್ ಹಾಗೂ ಎಂ.ಕೆ. ರಾಘವನ್ ಸೇರಿದಂತೆ ಹಲವು ಜನಪ್ರತಿನಿಧಿಗಳು ಕೂಡ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದು, ಪಾಲಕ್ಕಾಡ್ ವಿಭಾಗದ ರೆಕ್ಕೆಗಳನ್ನು ಕತ್ತರಿಸುವ ಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕದ ಒತ್ತಡಕ್ಕೆ ಮಣಿದು ಈ ಆದೇಶ ಹೊರಡಿಸಲಾಗಿದೆ ಎಂದು ದೂರಲಾಗಿದ್ದು, ಸಂಸತ್ತಿನ ಒಳಗೆ ಮತ್ತು ಹೊರಗೆ ಧ್ವನಿ ಎತ್ತಲು ಕೇರಳದ ಸಂಸದರು ನಿರ್ಧರಿಸಿದ್ದಾರೆ. ಅಕ್ಟೋಬರ್ 1 ರಿಂದ ಈ ನೂತನ ಆಡಳಿತಾತ್ಮಕ ಬದಲಾವಣೆ ಜಾರಿಗೆ ಬರಲಿದ್ದು, ಕೇರಳಕ್ಕೆ ಪ್ರತ್ಯೇಕ ರೈಲ್ವೆ ವಲಯ ಹಾಗೂ ಪಾಲಕ್ಕಾಡ್ ಮತ್ತು ತಿರುವನಂತಪುರಂ ವಿಭಾಗಗಳನ್ನು ಬಲಪಡಿಸಬೇಕೆಂಬ ಬಹುದಿನಗಳ ಬೇಡಿಕೆಗೆ ಕೇಂದ್ರದ ಈ ಆದೇಶ ದೊಡ್ಡ ಹಿನ್ನಡೆ ತಂದೊಡ್ಡಿದೆ.

Category
ಕರಾವಳಿ ತರಂಗಿಣಿ