image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ದೆಹಲಿಯಲ್ಲಿ ಬೃಹತ್ 'ಮೀಸಲಾತಿ ಹಟಾವೋ' ಪ್ರತಿಭಟನೆ: ಆರ್ಥಿಕ ಆಧಾರಿತ ವ್ಯವಸ್ಥೆಗೆ ಆಗ್ರಹ

ದೆಹಲಿಯಲ್ಲಿ ಬೃಹತ್ 'ಮೀಸಲಾತಿ ಹಟಾವೋ' ಪ್ರತಿಭಟನೆ: ಆರ್ಥಿಕ ಆಧಾರಿತ ವ್ಯವಸ್ಥೆಗೆ ಆಗ್ರಹ

ನವದೆಹಲಿ : ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಷ್‌ಟ್ಯಾಗ್‌ ಮೂಲಕ ಆರಂಭಗೊಂಡಿದ್ದ ಮೀಸಲಾತಿ ವಿರೋಧಿ ಅಭಿಯಾನವು ಇದೀಗ ನವದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯ ರೂಪ ಪಡೆದುಕೊಂಡಿದೆ. 'ರಿಸರ್ವೇಶನ್ ಹಟಾವೋ ಆಂದೋಲನ'ದ ಬ್ಯಾನರ್‌ ಅಡಿಯಲ್ಲಿ ಸಾವಿರಾರು ಪ್ರತಿಭಟನಾಕಾರರು ಜಮಾಯಿಸಿದ್ದು, ಪ್ರಸ್ತುತ ಚಾಲ್ತಿಯಲ್ಲಿರುವ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ರದ್ದುಗೊಳಿಸಿ, ಸಂಪೂರ್ಣವಾಗಿ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಮೀಸಲಾತಿ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಈ ಬೆಳವಣಿಗೆಯು ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರಕ್ಕೆ ಭಾರೀ ರಾಜಕೀಯ ಸವಾಲಾಗಿ ಪರಿಣಮಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ.

ವಿದ್ಯಾರ್ಥಿ ಹರ್ಷ ದುಬೆ ಇನ್‌ಸ್ಟಾಗ್ರಾಮ್‌ನಲ್ಲಿ ಆರಂಭಿಸಿದ್ದ ಈ ಡಿಜಿಟಲ್ ಅಭಿಯಾನಕ್ಕೆ ಇದೀಗ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಪ್ರಸ್ತುತ ಅನುರಾಧಾ ತಿವಾರಿ, ಅಜಿತ್ ಭಾರ್ತಿ ಹಾಗೂ ನೇಹಾ ದಾಸ್ ಅವರಂತಹ ಪ್ರಮುಖ ಸಾಮಾಜಿಕ ಜಾಲತಾಣದ ಹೋರಾಟಗಾರರು ಈ ಪ್ರತಿಭಟನೆಯ ಮುಂಚೂಣಿಯಲ್ಲಿದ್ದಾರೆ. ಇದರೊಂದಿಗೆ ಸಮಾಜದ ಸಾಮಾನ್ಯ ವರ್ಗವನ್ನು ಪ್ರತಿನಿಧಿಸುವ ಕರ್ಣಿ ಸೇನೆ ಮತ್ತು ರಣವೀರ್ ಸೇನೆಯಂತಹ ಪ್ರಭಾವಿ ಸಂಘಟನೆಗಳು ಸಹ ಬೆಂಬಲ ಸೂಚಿಸಿದ್ದು, ಜಾಲತಾಣದ ಆಕ್ರೋಶವು ಇದೀಗ ಬೀದಿಗಿಳಿದು ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಪ್ರತಿಭಟನಾಕಾರರು ಸಾಂವಿಧಾನಿಕ ಮೀಸಲಾತಿ ಪದ್ಧತಿಯಲ್ಲಿ ಸಂಪೂರ್ಣ ಬದಲಾವಣೆಯನ್ನು ಬಯಸಿದ್ದು, ಜಾತಿಗಿಂತ ಆರ್ಥಿಕ ಆಧಾರಿತ ವ್ಯವಸ್ಥೆಯನ್ನು ತಕ್ಷಣವೇ ಜಾರಿಗೆ ತರಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರ ಜೊತೆಗೆ 'ಒಂದು ಕುಟುಂಬಕ್ಕೆ ಒಂದೇ ಮೀಸಲಾತಿ' ನಿಯಮ ಜಾರಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನಿಷ್ಠ ಅರ್ಹತಾ ಅಂಕ ನಿಗದಿ, ಖಾಲಿ ಉಳಿಯುವ ಸೀಟುಗಳ ಡಿ-ರಿಸರ್ವೇಶನ್, ಶೇ.೫೦ರ ಮೀಸಲಾತಿ ಮಿತಿ ವಿಸ್ತರಿಸದಿರುವುದು ಹಾಗೂ ಯುಜಿಸಿಯ ೨೦೨೬ರ ಜಾತಿ ಸಮಾನತೆಯ ನಿಯಮಾವಳಿಗಳನ್ನು ಹಿಂಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ.

ಒಂದು ವೇಳೆ ಕೇಂದ್ರ ಸರ್ಕಾರವು ಈ ಬೇಡಿಕೆಗಳಿಗೆ ಒಲವು ತೋರಿ ಜಾತಿ ಆಧಾರಿತ ಮೀಸಲಾತಿಯನ್ನು ಕೈಬಿಟ್ಟರೆ ಅಥವಾ ಸೀಮಿತಗೊಳಿಸಿದರೆ, ಅದು ದೇಶದಲ್ಲಿ ದೊಡ್ಡ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಲಿದೆ. ಶತಮಾನಗಳಿಂದ ಸಾಮಾಜಿಕವಾಗಿ ತುಳಿತಕ್ಕೊಳಗಾದ ಸಮುದಾಯಗಳಿಗೆ ನೀಡಲಾದ ಸಾಂವಿಧಾನಿಕ ರಕ್ಷಣೆಯನ್ನು ದುರ್ಬಲಗೊಳಿಸುವ ಯತ್ನವೆಂದು ಪರಿಗಣಿಸಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ (OBC) ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಲಿದ್ದು, ದಲಿತ ಮತ್ತು ಹಿಂದುಳಿದ ವರ್ಗಗಳನ್ನು ಮತ್ತೊಂದು ಬೃಹತ್ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ತಳ್ಳುವ ಸಾಧ್ಯತೆಯಿದೆ.

Category
ಕರಾವಳಿ ತರಂಗಿಣಿ