ನವದೆಹಲಿ : ದಕ್ಷಿಣ ಏಷ್ಯಾದ ಭದ್ರತಾ ವಲಯದಲ್ಲಿ ಮತ್ತೊಮ್ಮೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಚೀನಾ ಮತ್ತು ಟರ್ಕಿಯಿಂದ ಪಾಕಿಸ್ತಾನಕ್ಕೆ ಭಾರಿ ಪ್ರಮಾಣದ ಸೇನಾ ಸರಕುಗಳು ರವಾನೆಯಾಗುತ್ತಿರುವ ವರದಿಗಳು ಹೊರಬಿದ್ದಿವೆ. ಕಳೆದ ಸುಮಾರು 60 ಗಂಟೆಗಳಲ್ಲಿ ಚೀನಾ ಹಾಗೂ ಟರ್ಕಿಯ ಬೃಹತ್ ಸೇನಾ ಸಾರಿಗೆ ವಿಮಾನಗಳು ಪಾಕಿಸ್ತಾನದ ಪ್ರಮುಖ ವಾಯುನೆಲೆಗಳಿಗೆ ನಿರಂತರವಾಗಿ ಸಂಚರಿಸಿರುವುದು ದಕ್ಷಿಣ ಏಷ್ಯಾದ ರಕ್ಷಣಾ ವಲಯದಲ್ಲಿ ಹೊಸ ಭೀತಿಯನ್ನು ಹುಟ್ಟುಹಾಕಿದೆ.
ವರದಿಗಳ ಪ್ರಕಾರ, ರಾವಲ್ಪಿಂಡಿ ಬಳಿಯ ನೂರ್ ಖಾನ್ ಮತ್ತು ಕರಾಚಿಯ ಮಸ್ರೂರ್ ವಾಯುನೆಲೆಗಳಲ್ಲಿ ಈ ಮಿಲಿಟರಿ ವಿಮಾನಗಳು ಸತತವಾಗಿ ಇಳಿದು ಕಾರ್ಯಾಚರಣೆ ನಡೆಸಿವೆ. ಈ ವಿಮಾನಗಳಲ್ಲಿ ಸುಧಾರಿತ ಡ್ರೋನ್‌ಗಳು, ವಾಯು ರಕ್ಷಣಾ ವ್ಯವಸ್ಥೆಗಳು ಹಾಗೂ ಇತರ ರಕ್ಷಣಾ ಸಾಮಗ್ರಿಗಳನ್ನು ಸಾಗಿಸಿರಬಹುದು ಎಂದು ಭದ್ರತಾ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಆದರೆ, ಸಾಗಿಸಲಾದ ಸಾಮಗ್ರಿಗಳ ಸಂಪೂರ್ಣ ಪಟ್ಟಿ ಅಥವಾ ನಿಖರ ಪ್ರಮಾಣದ ಕುರಿತು ಭಾರತ, ಚೀನಾ ಅಥವಾ ಪಾಕಿಸ್ತಾನ ಸರ್ಕಾರಗಳು ಯಾವುದೇ ಅಧಿಕೃತ ಮಾಹಿತಿಯನ್ನು ಸಾರ್ವಜನಿಕವಾಗಿ ದೃಢಪಡಿಸಿಲ್ಲ.
ಈ ಹಠಾತ್ ಏರ್‌ಲಿಫ್ಟ್ ಬೆಳವಣಿಗೆಯ ಹಿಂದೆ ಪ್ರಮುಖ ರಾಜತಾಂತ್ರಿಕ ಹಿನ್ನೆಲೆಯೂ ಇದೆ. ಇತ್ತೀಚೆಗಷ್ಟೇ ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ಟರ್ಕಿ 'ಮಕ್ಕಾ ಜಂಟಿ ರಕ್ಷಣಾ ಒಪ್ಪಂದ'ಕ್ಕೆ ಸಹಿ ಹಾಕಿವೆ. ಈ ಒಪ್ಪಂದದ ಪ್ರಕಾರ, ಮೂರು ದೇಶಗಳಲ್ಲಿ ಯಾವುದಾದರೂ ಒಂದರ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಮೂವರ ಮೇಲಿನ ದಾಳಿ ಎಂದು ಪರಿಗಣಿಸುವ ತತ್ವವನ್ನು ಘೋಷಿಸಲಾಗಿದೆ. ಇದರ ಬೆನ್ನಲ್ಲೇ ತ್ರಿಪಕ್ಷೀಯ ಸಮನ್ವಯ ವ್ಯವಸ್ಥೆ ರೂಪಿಸಿ ಜಂಟಿ ಭೂ, ನೌಕಾ, ವಾಯುಪಡೆ ಅಭ್ಯಾಸಗಳು, ಡ್ರೋನ್, ಎಲೆಕ್ಟ್ರಾನಿಕ್ ವಾರ್‌ಫೇರ್ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸಲು ಟರ್ಕಿ ನಿರ್ಧರಿಸಿತ್ತು. ಹೀಗಾಗಿ ಪ್ರಸ್ತುತ ಕಾರ್ಯಾಚರಣೆಯು ಈ ಹೊಸ ಮೈತ್ರಿಕೂಟದ ರಕ್ಷಣಾ ಸಿದ್ಧತೆಯ ಭಾಗವಾಗಿರಬಹುದು ಎಂದು ಭಾವಿಸಲಾಗಿದೆ.
ಮತ್ತೊಂದೆಡೆ, ಚೀನಾ-ಪಾಕಿಸ್ತಾನಗಳ ದಶಕಗಳ ಕಾಲದ ರಕ್ಷಣಾ ಬಾಂಧವ್ಯವೂ ಮತ್ತಷ್ಟು ಗಟ್ಟಿಗೊಂಡಿದೆ. ಪಾಕಿಸ್ತಾನ ವಾಯುಪಡೆಯ ಪ್ರಮುಖ ಯುದ್ಧವಿಮಾನಗಳಾದ ಜೆಎಫ್-17 ಮತ್ತು ಜೆ-10ಸಿ ಉತ್ಪಾದನೆಯಲ್ಲಿ ಚೀನಾ ಪ್ರಮುಖ ಪಾತ್ರ ವಹಿಸುತ್ತಿದೆ. ಹಾಗೆಯೇ, ಪಾಕಿಸ್ತಾನವು ಟರ್ಕಿಯಿಂದ ಬೇರಕ್ತಾರ್ TB2 ಮತ್ತು ಅಕಿಂಜಿ ಮಾದರಿಯ ಮಾನವರಹಿತ ಯುದ್ಧವಿಮಾನಗಳನ್ನು ಈಗಾಗಲೇ ಪಡೆದುಕೊಂಡಿದೆ. ಕಳೆದ 2025ರ ಭಾರತ-ಪಾಕಿಸ್ತಾನ ಸಂಘರ್ಷದ ಬಳಿಕ, ಪಾಕಿಸ್ತಾನ ತನ್ನ ಡ್ರೋನ್, ವಾಯು ರಕ್ಷಣಾ ಮತ್ತು ನಿಖರ ದಾಳಿ ಸಾಮರ್ಥ್ಯಗಳನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ಸಾಧ್ಯತೆಯನ್ನು ಭದ್ರತಾ ವಿಶ್ಲೇಷಕರು ಗಂಭೀರವಾಗಿ ಗಮನಿಸುತ್ತಿದ್ದಾರೆ.