image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಕಲೆಯನ್ನು ಧರ್ಮಕ್ಕೆ ಸೀಮಿತಗೊಳಿಸಬೇಡಿ: ಶರ್ಮಿಳಾ ಟ್ಯಾಗೋರ್‌ಗೆ ಕಂಗನಾ ಪ್ರತ್ಯುತ್ತರ

ಕಲೆಯನ್ನು ಧರ್ಮಕ್ಕೆ ಸೀಮಿತಗೊಳಿಸಬೇಡಿ: ಶರ್ಮಿಳಾ ಟ್ಯಾಗೋರ್‌ಗೆ ಕಂಗನಾ ಪ್ರತ್ಯುತ್ತರ

ನವದೆಹಲಿ : ವಂದೇ ಮಾತರಂ ಗೀತೆಯ ಕುರಿತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿರುವ ಹೇಳಿಕೆ ದೇಶಾದ್ಯಂತ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಸಂಸದೆ ಹಾಗೂ ನಟಿ ಕಂಗನಾ ರಣಾವತ್ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ 'ಐಎಎನ್‌ಎಸ್' (IANS) ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಶರ್ಮಿಳಾ ಟ್ಯಾಗೋರ್, ಭಾರತದಲ್ಲಿ ವಿವಿಧ ಧರ್ಮಗಳ ಜನರಿದ್ದು, ಅನೇಕರು ಏಕದೇವೋಪಾಸನೆಯನ್ನು ಪಾಲಿಸುತ್ತಾರೆ ಎಂದು ಹೇಳಿದ್ದರು. ವಂದೇ ಮಾತರಂ ಗೀತೆಯ ಮುಂದಿನ ಚರಣಗಳಲ್ಲಿ 'ವಂದೇ ಕಾಳಿ' ಅಥವಾ 'ವಂದೇ ದುರ್ಗಾ' ಎಂಬ ದೇವತೆಗಳ ಉಲ್ಲೇಖ ಬರುವುದರಿಂದ ಏಕದೇವೋಪಾಸಕರಿಗೆ ಅದನ್ನು ಒಪ್ಪಿಕೊಳ್ಳುವುದು ಕಷ್ಟವಾಗಬಹುದು, ಹೀಗಾಗಿ ಭಾರತದ ಎಲ್ಲ ಧರ್ಮಗಳ ಜನರನ್ನು ಒಟ್ಟಾಗಿ ಕೊಂಡೊಯ್ಯುವ ನಿಟ್ಟಿನಲ್ಲಿ ಗೀತೆಯ ಮೊದಲ ಎರಡು ಚರಣಗಳು ಮಾತ್ರ ಅತ್ಯಂತ ಸೂಕ್ತ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಶರ್ಮಿಳಾ ಅವರ ಈ ಸಂದರ್ಶನದ ವೀಡಿಯೊವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಕಂಗನಾ ರಣಾವತ್, ಹಿರಿಯ ನಟಿಯ ಅನಿಸಿಕೆಯನ್ನು ಗೌರವಿಸುತ್ತಲೇ ಒಬ್ಬ ಕಲಾವಿದೆಯಾಗಿ ಕಾವ್ಯ ಮತ್ತು ಕಲೆಯ ಬಗ್ಗೆ ಅವರ ಚಿಂತನೆ ಇಷ್ಟೊಂದು ಸೀಮಿತವಾಗಿರುವುದು ಆಘಾತ ತಂದಿದೆ ಎಂದು ಬರೆದುಕೊಂಡಿದ್ದಾರೆ. ಕವಿತೆ ಅಥವಾ ಗೀತೆಯಲ್ಲಿ ಬಳಕೆಯಾಗುವ ಪದಗಳು ಕೇವಲ ರೂಪಕಗಳು. ಕವಿ ಅಥವಾ ಕಲಾವಿದ ತನ್ನ ಕಲ್ಪನೆಯ ಮೂಲಕ ಅಪೂರ್ವ ಹೋಲಿಕೆಗಳನ್ನು ನೀಡುತ್ತಾ ಕೃತಿಯ ಸೌಂದರ್ಯವನ್ನು ಹೆಚ್ಚಿಸುತ್ತಾನೆ ಎಂದು ಕಂಗನಾ ಪ್ರತಿಪಾದಿಸಿದ್ದಾರೆ.

ಬಂಕಿಂ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದ 'ವಂದೇ ಮಾತರಂ' ಗೀತೆಯು ಸ್ವಾತಂತ್ರ್ಯ ಸಂಗ್ರಾಮದ ಆತ್ಮದಂತಿದೆ ಎಂದಿರುವ ಕಂಗನಾ, ಈ ಗೀತೆಯ ಮೂಲಕ ದೇಶವಾಸಿಗಳ ಒಳಗಿರುವ 'ಶಕ್ತಿ'ಯನ್ನು ಜಾಗೃತಗೊಳಿಸಲು ಕರೆ ನೀಡಿದ್ದರೇ ಹೊರತು, ಇದನ್ನು ಕೇವಲ ಧಾರ್ಮಿಕ ಆಚರಣೆಗೆ ತಗ್ಗಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ಸ್ವಾಮಿ ವಿವೇಕಾನಂದರ ಹೇಳಿಕೆಯನ್ನು ನೆನಪಿಸಿಕೊಂಡ ಅವರು, ವಿವೇಕಾನಂದರು ಕಬ್ಬಿಣದ ಮೈಕಟ್ಟು ಮತ್ತು ನರಗಳಲ್ಲಿ ಸಿಡಿಲ ತೇಜಸ್ಸು ಇರುವ ಯುವಕರು ಬೇಕು ಎಂದಾಗ ವಾತಾವರಣದ ವರದಿ ನೀಡುತ್ತಿರಲಿಲ್ಲ, ಬದಲಿಗೆ ಆಂತರಿಕ ಚೈತನ್ಯವನ್ನು ಜಾಗೃತಗೊಳಿಸುವಂತೆ ಕೇಳಿಕೊಳ್ಳುತ್ತಿದ್ದರು ಎಂದು ವಿವರಿಸಿದ್ದಾರೆ.

ಪ್ರತಿಯೊಂದನ್ನೂ 'ಹಿಂದೂ-ಮುಸ್ಲಿಂ' ಕಣ್ಣೋಟದಿಂದ ನೋಡುವುದನ್ನು ಬಿಡಿ ಎಂದು ಮನವಿ ಮಾಡಿರುವ ಕಂಗನಾ, ವೈದ್ಯರು ಸಹ ನಮ್ಮ ದೇಹದ ಆಂತರಿಕ ಬಲವನ್ನು 'ಶಕ್ತಿ' ಎಂದೇ ಕರೆಯುತ್ತಾರೆ ಎಂದು ಉದಾಹರಿಸಿದ್ದಾರೆ. ಪ್ರತಿಯೊಬ್ಬರನ್ನೂ ನಮ್ಮವರೆಂದು ಅಪ್ಪಿಕೊಳ್ಳೋಣ ಎಂದು ಕರೆ ನೀಡಿದ ಅವರು, ಶರ್ಮಿಳಾ ಟ್ಯಾಗೋರ್ ಅವರ ಮೇಲಿರುವ ತಮ್ಮ ವೈಯಕ್ತಿಕ ಪ್ರೀತಿ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ