image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಿಚಿತ್ರ ಚರ್ಮರೋಗದಿಂದ ಕೆರೆಯಲ್ಲೇ ವಾಸಿಸುತ್ತಿದ್ದ ಬಾಲಕನ ನೆರವಿಗೆ ಧಾವಿಸಿದ ಅನಂತ್ ಅಂಬಾನಿ

ವಿಚಿತ್ರ ಚರ್ಮರೋಗದಿಂದ ಕೆರೆಯಲ್ಲೇ ವಾಸಿಸುತ್ತಿದ್ದ ಬಾಲಕನ ನೆರವಿಗೆ ಧಾವಿಸಿದ ಅನಂತ್ ಅಂಬಾನಿ

ಮುಂಬಯಿ : ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾ ಗ್ರಾಮದ ಇಕ್ಬಾಲ್ ಎಂಬ ಬಾಲಕ ಅಪರೂಪದ ಹಾಗೂ ವಿಚಿತ್ರ ಚರ್ಮರೋಗದಿಂದ ಬಳಲುತ್ತಿದ್ದು, ದಿನದ 24 ಗಂಟೆಯೂ ಕೆರೆಯ ನೀರಿನಲ್ಲೇ ಕಾಲ ಕಳೆಯುತ್ತಿದ್ದ ದೃಶ್ಯ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿತ್ತು. ನೀರಿನಿಂದ ಹೊರಬಂದ ತಕ್ಷಣವೇ ಇಡೀ ದೇಹದಲ್ಲಿ ತೀವ್ರ ಉರಿ ಹಾಗೂ ಸೂಜಿ ಚುಚ್ಚಿದಂತೆ ವಿಪರೀತ ನೋವು ಕಾಣಿಸಿಕೊಳ್ಳುತ್ತಿದ್ದ ಕಾರಣ, ಆ ನೋವಿನಿಂದ ತಪ್ಪಿಸಿಕೊಳ್ಳಲು ಆತ ಹಗಲು-ರಾತ್ರಿ ಎನ್ನದೆ ಕೆರೆಯ ನೀರಿನಲ್ಲೇ ಮುಳುಗಿರಬೇಕಾಗಿತ್ತು. ಈ ಹಿಂದೆ ಆಸ್ಪತ್ರೆಗೆ ಕರೆದೊಯ್ದರೂ ಗುಣಮುಖವಾಗದ ಕಾರಣ ಹಾಗೂ ಬಡತನದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗದೆ ಪೋಷಕರು ನೆರವಿಗಾಗಿ ಮನವಿ ಮಾಡಿದ್ದರು.

ನಿರಂತರವಾಗಿ ನೀರಿನಲ್ಲೇ ವಾಸಿಸುವುದರಿಂದ ಚರ್ಮವು ಮೆದುವಾಗಿ (Skin Maceration) ಬಿರುಕು ಬಿಟ್ಟು ಗಂಭೀರ ಮಟ್ಟದ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರ (Fungal) ಸೋಂಕುಗಳಿಗೆ ತುತ್ತಾಗುವ ಅಪಾಯವಿದೆ ಎಂದು ಚರ್ಮರೋಗ ತಜ್ಞರು ಆತಂಕ ವ್ಯಕ್ತಪಡಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಬಾಲಕ ಕೆರೆಯಲ್ಲೇ ಕುಳಿತು ತಿಂಡಿ ತಿನ್ನುವ ಕರುಣಾಜನಕ ದೃಶ್ಯವನ್ನು ಗಮನಿಸಿದ ರಿಲಯನ್ಸ್ ಇಂಡಸ್ಟ್ರೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅನಂತ್ ಅಂಬಾನಿ ತಕ್ಷಣವೇ ಮಾನವೀಯತೆಯಿಂದ ಸ್ಪಂದಿಸಿದ್ದಾರೆ.

ಅನಂತ್ ಅಂಬಾನಿ ಅವರ ಸೂಚನೆಯ ಮೇರೆಗೆ ಬಾಲಕ ಇಕ್ಬಾಲ್‌ನನ್ನು ವಿಶೇಷ ವಿಮಾನದ (Airlift) ಮೂಲಕ ಮುಂಬೈಗೆ ಕರೆಸಿಕೊಳ್ಳಲಾಗಿದೆ. ಮುಂಬೈನ ಪ್ರತಿಷ್ಠಿತ 'ಸರ್ ಹೆಚ್.ಎನ್. ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ'ಯಲ್ಲಿ ಆತನಿಗೆ ಸಂಪೂರ್ಣ ಉಚಿತ ಹಾಗೂ ವಿಶೇಷ ವೈದ್ಯಕೀಯ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ಅನುಭವಿ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಆರಂಭವಾಗಿದೆ. ಬಡ ಕುಟುಂಬದ ನೋವಿಗೆ ಸ್ಪಂದಿಸಿ ಬಾಲಕನಿಗೆ ಹೊಸ ಜೀವನ ನೀಡಲು ಮುಂದಾಗಿರುವ ಅನಂತ್ ಅಂಬಾನಿ ಅವರ ಈ ಮಾನವೀಯ ಗುಣಕ್ಕೆ ದೇಶಾದ್ಯಂತ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Category
ಕರಾವಳಿ ತರಂಗಿಣಿ