ನವದೆಹಲಿ : ಜುಲೈ 20ರಂದು ದೆಹಲಿಯ ಜಂತರ್ ಮಂತರ್‌ನಿಂದ ಸಂಸತ್ತಿನತ್ತ ನಡೆದ ವಿದ್ಯಾರ್ಥಿಗಳ 'ಸಂಸತ್ ಚಲೋ' ಮೆರವಣಿಗೆಗೆ ಯಾವುದೇ ಅನುಮತಿ ನೀಡಿರಲಿಲ್ಲ ಹಾಗೂ ಬ್ಯಾರಿಕೇಡ್‌ಗಳನ್ನು ದಾಟಿ ಮುನ್ನುಗ್ಗಲು ನಡೆಸಿದ ಯತ್ನ ಕಾನೂನುಬಾಹಿರವಾಗಿತ್ತು ಎಂದು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ಪ್ರತಿಭಟನೆ ವೇಳೆ ಅತಿಯಾದ ಬಲಪ್ರಯೋಗ ಹಾಗೂ ಲಾಠಿಚಾರ್ಜ್ ನಡೆಸಲಾಗಿದೆ ಎಂಬ ಆರೋಪಗಳನ್ನು ತಳ್ಳಿಹಾಕಿರುವ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಹಂತ ಹಂತವಾಗಿ ಪ್ರಮಾಣಾನುಗುಣ ಬಲಪ್ರಯೋಗ ಮಾತ್ರ ಮಾಡಲಾಗಿದೆ ಎಂದು ವಾದಿಸಿದ್ದಾರೆ.
ಅಫಿಡವಿಟ್ ವಿವರಗಳ ಪ್ರಕಾರ, ಜಂತರ್ ಮಂತರ್ ಸುತ್ತಮುತ್ತ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಸುಮಾರು 30 ಸಾವಿರ ಜನರು ಸೇರಿದ್ದು, ಪರಿಸ್ಥಿತಿ ನಿಭಾಯಿಸಲು 5 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಆರಂಭದಲ್ಲಿ ಶಾಂತಿಯುತವಾಗಿದ್ದ ಪ್ರತಿಭಟನೆಯು, ಬ್ಯಾರಿಕೇಡ್‌ಗಳನ್ನು ಮುರಿದು ಸಂಸತ್ತಿನತ್ತ ಸಾಗಲು ಯತ್ನಿಸಿದಾಗ ಉದ್ವಿಗ್ನಗೊಂಡಿತು. ಈ ಘರ್ಷಣೆಯಲ್ಲಿ 240ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಸುಮಾರು 200 ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 2,873 ಮಂದಿಯ ಹಿನ್ನೆಲೆ ಹಾಗೂ ಪಾತ್ರವನ್ನು ವಿಶೇಷ ತನಿಖಾ ತಂಡವು ಪರಿಶೀಲಿಸುತ್ತಿದೆ.
ಚೂಪಾದ ಲಾಠಿ ಬಳಸಲಾಗಿದೆ ಎಂಬ ಆರೋಪಕ್ಕೂ ಸ್ಪಷ್ಟನೆ ನೀಡಿರುವ ಪೊಲೀಸರು, ವಿಡಿಯೋದಲ್ಲಿ ಕಾಣಿಸಿಕೊಂಡ ವಸ್ತುವು ಪೊಲೀಸ್ ಅಧಿಕಾರಿಯ ಕೈಯಲ್ಲಿರಲಿಲ್ಲ, ಬದಲಿಗೆ ಪ್ರತಿಭಟನಾಕಾರರೊಬ್ಬರು ರಾಷ್ಟ್ರಧ್ವಜ ಕೊಂಡೊಯ್ಯಲು ಬಳಸಿದ ಕೋಲಾಗಿತ್ತು ಎಂದಿದ್ದಾರೆ. ಕಣ್ಗಾವಲು ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನ (FRT) ಬಳಕೆಯನ್ನು ಸಮರ್ಥಿಸಿಕೊಂಡಿರುವ ಅವರು, ಸಾರ್ವಜನಿಕ ಸಭೆಗಳಲ್ಲಿ ಸಾದಾ ಉಡುಪಿನಲ್ಲಿ ಸಿಬ್ಬಂದಿ ನಿಯೋಜಿಸುವುದು ಸಾಮಾನ್ಯ ಭದ್ರತಾ ಪ್ರಕ್ರಿಯೆಯಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೀಮಿತ ತಂತ್ರಜ್ಞಾನ ಬಳಸಲಾಗಿದೆ ಎಂದು ವಿವರಿಸಿದ್ದಾರೆ.