ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಳಸಿದ 'ದಿಮಾಗಿ ನಕ್ಸಲರು' ಎಂಬ ಪದಕ್ಕೆ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಪದದ ಕುರಿತು ವಿವರಣೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ವಿರೋಧ ಪಕ್ಷದ ಎಲ್ಲ ನಾಯಕರನ್ನು 'ದಿಮಾಗಿ ನಕ್ಸಲರು' ಎಂದು ಕರೆದಿಲ್ಲ; ಆದರೆ ಅವರಲ್ಲಿ ಕೆಲವರು ಅಂತಹ ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ರಿಜಿಜು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ Xನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಕಿರಣ್ ರಿಜಿಜು, 'ದಿಮಾಗಿ ನಕ್ಸಲರು' ಎಂದರೆ ಯಾರು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಮಾವೋವಾದಿಗಳನ್ನು ಬೆಂಬಲಿಸುವವರು, ಭಾರತೀಯ ಸಂವಿಧಾನವನ್ನು ತಿರಸ್ಕರಿಸುವವರು, ಪ್ರತ್ಯೇಕತಾವಾದಿಗಳ ಜೊತೆ ನಿಂತು 370ನೇ ವಿಧಿಯನ್ನು ಬೆಂಬಲಿಸುವವರು ಹಾಗೂ ಈಶಾನ್ಯ ಭಾರತವನ್ನು ದೇಶದ ಉಳಿದ ಭಾಗದಿಂದ ಪ್ರತ್ಯೇಕಿಸಲು ಬಯಸುವವರನ್ನು ಈ ಸಾಲಿಗೆ ಸೇರಿಸಿದ್ದಾರೆ. ಜೊತೆಗೆ ಈಶಾನ್ಯ ರಾಜ್ಯಗಳನ್ನು ದೇಶದೊಂದಿಗೆ ಸಂಪರ್ಕಿಸುವ ಪಶ್ಚಿಮ ಬಂಗಾಳದಲ್ಲಿರುವ ಸುಮಾರು 22 ಕಿ.ಮೀ. ಅಗಲದ 'ಚಿಕನ್ ನೆಕ್' ಭೂ ಕಾರಿಡಾರ್ ಅನ್ನು ಕತ್ತರಿಸಬೇಕು ಎಂದು ಕರೆ ನೀಡುವವರೂ ಸಹ 'ದಿಮಾಗಿ ನಕ್ಸಲರು' ಎಂದು ರಿಜಿಜು ವಿವರಿಸಿದ್ದಾರೆ.