image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ವಿಮಲ್ ಪಾನ್ ಮಸಾಲಾ ಜಾಹೀರಾತು: ಶಾರುಖ್, ಅಜಯ್, ಟೈಗರ್‌ಗೆ ಎಫ್‌ಡಿಎ ನೋಟಿಸ್

ವಿಮಲ್ ಪಾನ್ ಮಸಾಲಾ ಜಾಹೀರಾತು: ಶಾರುಖ್, ಅಜಯ್, ಟೈಗರ್‌ಗೆ ಎಫ್‌ಡಿಎ ನೋಟಿಸ್

ಮುಂಬೈ : ಬಾಲಿವುಡ್ ಪ್ರಸಿದ್ಧ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಮತ್ತು ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನಿಷೇಧಿತ 'ವಿಮಲ್ ಪಾನ್ ಮಸಾಲಾ' ಉತ್ಪನ್ನವನ್ನು 'ವಿಮಲ್ ಏಲಕ್ಕಿ' ಜಾಹೀರಾತಿನ ನೆಪದಲ್ಲಿ ಪರೋಕ್ಷವಾಗಿ (ಸರೋಗೇಟ್ ಆಡ್) ಪ್ರಚಾರ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಈ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಮಹಾರಾಷ್ಟ್ರದಲ್ಲಿ ಪಾನ್ ಮಸಾಲಾ ಹಾಗೂ ತಂಬಾಕು ಉತ್ಪನ್ನಗಳ ತಯಾರಿಕೆ, ಸಂಗ್ರಹಣೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಟರು ಏಲಕ್ಕಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರೂ, ಇದು ಜನರನ್ನು ತಪ್ಪುದಾರಿಗೆಳೆಯುವ ಹಾಗೂ ನಿಷೇಧಿತ ಪಾನ್ ಮಸಾಲಾವನ್ನೇ ಪ್ರತ್ಯಕ್ಷವಾಗಿ ಬಿಂಬಿಸುವ ತಂತ್ರವಾಗಿದೆ ಎಂದು ಎಫ್‌ಡಿಎ ಆಯುಕ್ತರ ನೇತೃತ್ವದ ಸಮಿತಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ನಟರು ತಕ್ಷಣವೇ ಈ ಜಾಹೀರಾತುಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಬೇಕು ಎಂದು ಸೂಚಿಸಲಾಗಿದೆ. ಜೊತೆಗೆ, ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳು ಹಾಗೂ ಡಿಜಿಟಲ್ ವೇದಿಕೆಗಳಿಂದ ಸಂಬಂಧಿಸಿದ ಪ್ರಚಾರದ ಪೋಸ್ಟ್‌ಗಳನ್ನು 15 ದಿನಗಳೊಳಗೆ ಅಳಿಸಿಹಾಕಬೇಕು ಎಂದು ಎಫ್‌ಡಿಎ ಖಡಕ್ ನಿರ್ದೇಶನ ನೀಡಿದೆ. ನೋಟಿಸ್ ತಲುಪಿದ 15 ದಿನಗಳ ಒಳಗೆ ನಟರು ಲಿಖಿತ ವಿವರಣೆ ಮತ್ತು ಪೂರಕ ದಾಖಲೆಗಳನ್ನು ಸಲ್ಲಿಸಲು ಸಮಯ ನೀಡಲಾಗಿದೆ. ನಟರು ಖುದ್ದಾಗಿ ಅಥವಾ ತಮ್ಮ ಅಧಿಕೃತ ಪ್ರತಿನಿಧಿಯ ಮೂಲಕ ವೈಯಕ್ತಿಕ ವಿಚಾರಣೆಗೂ ವಿನಂತಿಸಬಹುದು. ನಿಗದಿತ ಸಮಯದೊಳಗೆ ಸೂಕ್ತ ಉತ್ತರ ಬಾರದಿದ್ದರೆ ಅಥವಾ ನೀಡಿರುವ ವಿವರಣೆ ಅತೃಪ್ತಿಕರವಾಗಿದ್ದರೆ, ಯಾವುದೇ ಮುನ್ಸೂಚನೆ ನೀಡದೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಫ್‌ಡಿಎ ಎಚ್ಚರಿಸಿದೆ.

Category
ಕರಾವಳಿ ತರಂಗಿಣಿ