ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದ ಪ್ರಮುಖ ತೋಟಗಾರಿಕಾ ಬೆಳೆಗಳಾದ ಅಡಿಕೆ, ತೆಂಗು, ಕೋಕೋ ಹಾಗೂ ಸಾಂಬಾರು ಬೆಳೆಗಳು ಎದುರಿಸುತ್ತಿರುವ ಹವಾಮಾನ ಸವಾಲುಗಳಿಗೆ ತಕ್ಕಂತೆ 'ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ'ಯನ್ನು (RWBCIS) ತಕ್ಷಣವೇ ಮರು ಪರಿಷ್ಕರಣೆ ಮಾಡುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸದನದ ನಿಯಮ 377ರಡಿ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಬಹು ವಾರ್ಷಿಕ ತೋಟಗಾರಿಕಾ ಬೆಳೆಗಳು ಸಾಮಾನ್ಯ ಋತುಮಾನದ ಬೆಳೆಗಳಿಗಿಂತ ಅತ್ಯಂತ ವಿಭಿನ್ನ ಆಪತ್ತುಗಳನ್ನು ಎದುರಿಸುತ್ತವೆ. ನಿರಂತರ ಮಳೆ, ಕೀಟ ಹಾಗೂ ರೋಗಬಾಧೆ, ಹೆಚ್ಚಿನ ಆರ್ದ್ರತೆ ಮತ್ತು ತೋಟಗಳಲ್ಲಿ ನೀರು ನಿಲ್ಲುವಂತಹ ಸ್ಥಳೀಯ ವಾತಾವರಣದ ವೈಪರೀತ್ಯಗಳಿಂದ ಬೆಳೆ ಸಂಪೂರ್ಣವಾಗಿ ನಾಶವಾಗುತ್ತದೆ. ಹತ್ತಿರದ ಹವಾಮಾನ ಕೇಂದ್ರದಲ್ಲಿ ನಿಗದಿತ ಮಳೆ ಅಥವಾ ತಾಪಮಾನದ ಮಿತಿ ದಾಟದಿದ್ದರೂ, ನೈಜವಾಗಿ ತೋಟಗಳಲ್ಲಿ ವ್ಯಾಪಕ ನಷ್ಟ ಸಂಭವಿಸಿರುತ್ತದೆ ಎಂದು ಸಂಸದರು ವಿವರಿಸಿದರು.
ಈ ನಿಟ್ಟಿನಲ್ಲಿ ಕೇಂದ್ರ ಕೃಷಿ ಸಚಿವಾಲಯವು ಕೃಷಿ ವಿಜ್ಞಾನಿಗಳು ಹಾಗೂ ವಿಮಾ ಆಡಿಟರ್‌ಗಳ ಜಂಟಿ ಸಮಿತಿಯನ್ನು ತಕ್ಷಣವೇ ರಚಿಸಬೇಕೆಂದು ಅವರು ಆಗ್ರಹಿಸಿದರು. ಹವಾಮಾನ ಕೇಂದ್ರಗಳ ಸಾಂದ್ರತೆ, ಆರ್ದ್ರತೆಯ ಮಾನಿಟರಿಂಗ್ ವ್ಯವಸ್ಥೆ, ವಿಮಾ ಮೊತ್ತ ಹಾಗೂ ಪರಿಹಾರ ಪಾವತಿಯ ಕಾಲಮಿತಿಗಳನ್ನು ಒಳಗೊಂಡಂತೆ ನೈಜ ನಷ್ಟದ ಸ್ವರೂಪಕ್ಕೆ ತಕ್ಕಂತೆ ಯೋಜನೆಯ ರೂಪುರೇಷೆ ಸಿದ್ಧಪಡಿಸುವುದು ಅಗತ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ICAR ಸಂಸ್ಥೆಗಳು, ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳು, ವಿಮಾ ಕಂಪನಿಗಳು, ಕರ್ನಾಟಕ ಸರ್ಕಾರ ಹಾಗೂ ಬೆಳೆಗಾರರ ಒಕ್ಕೂಟಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಪ್ರತಿಪಾದಿಸಿದರು.
ಈ ವ್ಯವಸ್ಥೆಯನ್ನು ರಾಷ್ಟ್ರಮಟ್ಟದಲ್ಲಿ ಸಂಪೂರ್ಣವಾಗಿ ಜಾರಿಗೆ ತರುವ ಮುನ್ನ ಕರಾವಳಿ ಮತ್ತು ಮಲೆನಾಡಿನ ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು. ಹಾಗೆಯೇ, ವಿಮಾ ಪರಿಹಾರ ಪಾವತಿಯ ಮಾಹಿತಿಯನ್ನು ಪಾರದರ್ಶಕವಾಗಿ ಪ್ರಕಟಿಸುವುದರ ಜೊತೆಗೆ, ರಾಜ್ಯ ಸರ್ಕಾರಗಳು ಸೂಕ್ತ ಬೆಳೆಗಳನ್ನು ವಿಮೆಯ ವ್ಯಾಪ್ತಿಗೆ ತರಲು ಮಾದರಿ ಅಧಿಸೂಚನೆ ಮತ್ತು ನಿರ್ದಿಷ್ಟ ಕಾಲಮಿತಿಯನ್ನು ಒದಗಿಸಿಕೊಡಬೇಕೆಂದು ಕ್ಯಾ. ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಪ್ರಸ್ತಾಪಿಸಿದರು.