image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಅರುಣಾಚಲ ಪ್ರದೇಶದ 27 ಸ್ಥಳಗಳನ್ನು ಅಧಿಕೃತ ನಕ್ಷೆಯಲ್ಲಿ ಗುರುತಿಸಿದ ಭಾರತ

ಅರುಣಾಚಲ ಪ್ರದೇಶದ 27 ಸ್ಥಳಗಳನ್ನು ಅಧಿಕೃತ ನಕ್ಷೆಯಲ್ಲಿ ಗುರುತಿಸಿದ ಭಾರತ

ನವದೆಹಲಿ: ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಚೀನಾ ಪದೇ ಪದೇ ಮರುನಾಮಕರಣ ಮಾಡುತ್ತಿರುವುದಕ್ಕೆ ದಿಟ್ಟ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ಆ ರಾಜ್ಯದ 27 ಪ್ರಮುಖ ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟ್ಯಗಳನ್ನು ‘ಸರ್ವೆ ಆಫ್ ಇಂಡಿಯಾ’ದ ಅಧಿಕೃತ ನಕ್ಷೆಯಲ್ಲಿ ಅವುಗಳ ಪ್ರಮಾಣಿತ ಹೆಸರುಗಳೊಂದಿಗೆ ಔಪಚಾರಿಕವಾಗಿ ಗುರುತಿಸಿದೆ. ಅರುಣಾಚಲ ಪ್ರದೇಶದ ಸ್ಥಳಗಳನ್ನು ಭೂಪಟದಲ್ಲಿ ನಿಖರವಾಗಿ ಮಾರ್ಕ್ ಮಾಡುವುದು, ಸಾರ್ವಜನಿಕರಲ್ಲಿ ಸರಿಯಾದ ಜಾಗೃತಿ ಮೂಡಿಸುವುದು ಮತ್ತು ಆಡಳಿತಾತ್ಮಕ ಸ್ಪಷ್ಟತೆ ತರುವುದು ಈ ಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಅರುಣಾಚಲ ಪ್ರದೇಶವನ್ನು ‘ಝಾಂಗ್‌ನಾನ್’ ಎಂದು ಕರೆಯುವ ಚೀನಾ, 2017 ರಿಂದೀಚೆಗೆ ಮೂರು ಪಟ್ಟಿಗಳಲ್ಲಿ ಹಲವು ಸ್ಥಳಗಳಿಗೆ ಕಾಲ್ಪನಿಕ ಹೆಸರುಗಳನ್ನು ನೀಡಿ ಹಕ್ಕು ಸಾಧಿಸಲು ಯತ್ನಿಸಿತ್ತು. ಆದರೆ ಚೀನಾದ ಈ ನಡೆಯನ್ನು ಸತತವಾಗಿ ತಿರಸ್ಕರಿಸುತ್ತಾ ಬಂದಿರುವ ಭಾರತ, ಈ ರಾಜ್ಯವು ದೇಶದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಅಂಗವಾಗಿದೆ ಎಂದು ಸ್ಪಷ್ಟಪಡಿಸಿದೆ.

ಭಾರತವು ಈಗ ಅಧಿಕೃತವಾಗಿ ಗುರುತಿಸಿರುವ 27 ಸ್ಥಳಗಳ ಪಟ್ಟಿಯಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯ (LAC) ಬಳಿ ಇರುವ ಕಾರ್ಯತಂತ್ರದ ಪ್ರಮುಖ ಪ್ರದೇಶ 'ಲಾಂಗ್ ಜು' ಕೂಡ ಸೇರಿದೆ. 1959ರಲ್ಲಿ ಚೀನಾ ಪಡೆಗಳು ಈ ಪ್ರದೇಶವನ್ನು ಪ್ರವೇಶಿಸಿದಾಗ ಉಭಯ ದೇಶಗಳ ನಡುವೆ ಆರಂಭಿಕ ಭಿನ್ನಾಭಿಪ್ರಾಯ ಮತ್ತು ಘರ್ಷಣೆಗಳು ನಡೆದಿದ್ದವು. ಇದರೊಂದಿಗೆ ಅಪ್ಪರ್ ಸುಬನ್ಸಿರಿ ಜಿಲ್ಲೆಯ 'ಮಾಜಾ' ಗ್ರಾಮ, ಬಿಸಾ ಗ್ರಾಮ ಹಾಗೂ ಗಡಿ ಭಾಗದ ಪ್ರಮುಖ ಪರ್ವತ ಮಾರ್ಗಗಳಾದ ಡ್ಜೊ ಲಾ, ರಿಜಾ ಲಾ ಮತ್ತು ಪುಕುರ್ ಲಾ ಸಹ ಈ ಪಟ್ಟಿಯಲ್ಲಿವೆ. ಇದಲ್ಲದೆ, ಛೋಟಾ ರೋಪುಕ್, ಬಾರಾ ರೋಪುಕ್, ಶಿವಾಜಿ ನಗರ, ಸನ್‌ಪುರ, ಕಮಲಾಂಗ್ ಅಭಯಾರಣ್ಯದ ಸಮೀಪವಿರುವ ಕಮಲಾಂಗ್ ನಗರ, ಬುದ್ಧಮಂದಿರ ಹಾಗೂ 1962ರ ಯುದ್ಧದ ಪ್ರಮುಖ ಸ್ಮಾರಕವಾದ 'ಶೇರ್-ಎ-ಥಾಪಾ' ಸ್ಮಾರಕವನ್ನೂ ಕೂಡ ಈ ಅಧಿಕೃತ ಭೂಪಟದಲ್ಲಿ ಸೇರ್ಪಡೆಗೊಳಿಸಲಾಗಿದೆ. ಭಾರತ ಸರ್ಕಾರದ ಈ ಕ್ರಮವು ಗಡಿ ಭಾಗದ ಭೌಗೋಳಿಕ ಗುರುತನ್ನು ಭದ್ರಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

Category
ಕರಾವಳಿ ತರಂಗಿಣಿ