ಕೊಲ್ಕತ್ತಾ : ಮದರಸಾಗಳಲ್ಲಿ 'ವಂದೇ ಮಾತರಂ' ಗೀತೆಯ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಿದ ಕಲ್ಕತ್ತಾ ಹೈಕೋರ್ಟ್, ಈ ಗೀತೆಯನ್ನು ಹಾಡಿದರೆ "ಆಕಾಶವೇನೂ ಕಳಚಿ ಬೀಳುವುದಿಲ್ಲ" ಎಂದು ಮೌಖಿಕವಾಗಿ ಹೇಳಿದೆ. ವಿಚಾರಣೆ ವೇಳೆ ಹಂಗಾಮಿ ಮುಖ್ಯ ನ್ಯಾಯಮೂರ್ತಿ ತಪಬ್ರತ ಚಕ್ರವರ್ತಿ ಅವರು, "ಕ್ರೈಸ್ತ ಸಮುದಾಯದ ಅಧೀನದಲ್ಲಿರುವ ಸಾವಿರಾರು ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ದೇವರಲ್ಲಿ ಪ್ರಾರ್ಥನೆ ಮಾಡಲು ಸೂಚಿಸಲಾಗುತ್ತದೆ. ಆಗ ನಿರ್ದಿಷ್ಟ ಧರ್ಮಕ್ಕೆ ಸೇರದ ವಿದ್ಯಾರ್ಥಿಗಳು ಕ್ರೈಸ್ತ ಧರ್ಮದ ವಿಷಯಗಳನ್ನು ಹಾಡುವಂತೆ ಏಕೆ ಹೇಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಾರೆಯೇ? ನನ್ನ ಧರ್ಮದಲ್ಲಿಲ್ಲದ ವಿಚಾರವನ್ನು ಹೇಳುವಂತೆ ಕೇಳಿದರೆ, ನಾನು ನನ್ನ ಧರ್ಮಕ್ಕೆ ಸೇರದ ವ್ಯಕ್ತಿಯಾಗುತ್ತೇನೆಯೇ?" ಎಂದು ಪ್ರಶ್ನಿಸಿದರು.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಬಿಕಾಶ್ ರಂಜನ್ ಭಟ್ಟಾಚಾರ್ಯ ಅವರು, ಕೇಂದ್ರ ಸರ್ಕಾರವು ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡುವಂತೆ ಅಧಿಸೂಚನೆ ಹೊರಡಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. "ಸಂವಿಧಾನವನ್ನು ಅಂಗೀಕರಿಸಿದಾಗ ವ್ಯಾಪಕ ಚರ್ಚೆಯ ಬಳಿಕ ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ಮಾತ್ರ ಸ್ವೀಕರಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಯಾರಾದರೂ ಸ್ವಯಂಪ್ರೇರಿತವಾಗಿ ಉಳಿದ ಚರಣಗಳನ್ನು ಹಾಡಲು ಬಯಸಿದರೆ ಆಕ್ಷೇಪವಿಲ್ಲ, ಆದರೆ ಅದನ್ನು ಯಾರ ಮೇಲೆಯೂ ಬಲವಂತವಾಗಿ ಹೇರಬಾರದು" ಎಂದು ಅವರು ನ್ಯಾಯಪೀಠದ ಮುಂದೆ ವಾದಿಸಿದರು.