ಕೋಲ್ಕತ್ತಾ: ಪಶ್ಚಿಮ ಬಂಗಾಳದ ಚುನಾವಣೆ ಹಾಗೂ ಆ ನಂತರದ ರಾಜಕೀಯ ಬೆಳವಣಿಗೆಗಳು, ಸಚಿವರ ಬಂಧನ ಮತ್ತು ಪಕ್ಷದ ಒಳಗಿನ ಆಂತರಿಕ ಕಲಹಗಳ ಕುರಿತು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೌನ ಮುರಿದಿದ್ದಾರೆ. ಫೇಸ್‌ಬುಕ್ ಲೈವ್ ಮೂಲಕ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಕಟು ವಾಗ್ದಾಳಿ ನಡೆಸಿರುವ ಅವರು, ಬಂಗಾಳವನ್ನು ಬಿಜೆಪಿ ಬೃಹತ್ ಜೈಲನ್ನಾಗಿ ಪರಿವರ್ತಿಸಿದೆ ಎಂದು ಆರೋಪಿಸಿದ್ದಾರೆ. ತಮ್ಮ ಪಕ್ಷದ ಶಾಸಕರು ಮತ್ತು ಸಂಸದರಿಗೆ ಬೆದರಿಕೆ ಹಾಕಲಾಗುತ್ತಿದ್ದು, ‘ಬಿಜೆಪಿಗೆ ಸೇರಿ ಇಲ್ಲವೇ ಜೈಲಿಗೆ ಹೋಗಿ’ ಎಂದು ಒತ್ತಡ ಹೇರಲಾಗುತ್ತಿದೆ ಎಂದು ಮಮತಾ ದೂರಿದ್ದಾರೆ. ಅಲ್ಲದೆ, ಸಾವಿರಾರು ಟಿಎಂಸಿ ಕಾರ್ಯಕರ್ತರನ್ನು ಅನಗತ್ಯವಾಗಿ ಬಂಧಿಸಿ ಜೈಲಿನಲ್ಲಿಡಲಾಗಿದೆ ಎಂದಿದ್ದಾರೆ.
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ವಿರುದ್ಧ ಪ್ರತಿಭಟಿಸುತ್ತಿರುವ ಯುವಜನತೆಗೆ ಸರ್ಕಾರ ಕಿರುಕುಳ ನೀಡುತ್ತಿದ್ದು, ಪ್ರಶ್ನೆ ಕೇಳುವವರನ್ನು 'ರಾಷ್ಟ್ರವಿರೋಧಿಗಳು' ಎಂದು ಬ್ರಾಂಡ್ ಮಾಡಲಾಗುತ್ತಿದೆ ಎಂದು ದೀದಿ ಆಕ್ರೋಶ ಹೊರಹಾಕಿದ್ದಾರೆ. ಸಂಕಷ್ಟದಲ್ಲಿರುವ ಯುವಕರ ಕುಟುಂಬಗಳಿಗೂ ಬೆದರಿಕೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಈ ಅನ್ಯಾಯದ ವಿರುದ್ಧ ಜನರು ಒಗ್ಗೂಡಿ ಬೀದಿಗಿಳಿದು ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದಾರೆ. ಇದರ ಜೊತೆಗೆ, ಜನಗಣತಿ ಗೊಂದಲ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಮಾಡಲಾದ ಅವಮಾನದ ವಿಷಯದಲ್ಲೂ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.