ಕೊಲ್ಕತ್ತಾ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ದೇಶದಲ್ಲಿ ರಸ್ತೆ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಂಡಿದ್ದು, ಹೊಸ ವಾಹನಗಳಲ್ಲಿ 'ವೆಹಿಕಲ್ ಟು ವೆಹಿಕಲ್' (V2V) ಸಂಪರ್ಕ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲು ಕರಡು ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ನೇತೃತ್ವದ ಸಚಿವಾಲಯವು ಜಾರಿಗೆ ತರುತ್ತಿರುವ ಈ ನಿಯಮವು ಅಕ್ಟೋಬರ್ 2028ರಿಂದ ದೇಶಾದ್ಯಂತ ಜಾರಿಗೆ ಬರಲಿದೆ. ವಿ2ವಿ ಎಂದರೆ ವಾಹನಗಳ ನಡುವೆ ರಿಯಲ್ ಟೈಮ್‌ನಲ್ಲಿ ತಂತಿರಹಿತವಾಗಿ (ವೈರ್‌ಲೆಸ್) ಮಾಹಿತಿ ವಿನಿಮಯ ಮಾಡಿಕೊಳ್ಳುವ ಆಧುನಿಕ ತಂತ್ರಜ್ಞಾನವಾಗಿದೆ. ರಸ್ತೆಯಲ್ಲಿ ಸಂಚರಿಸುವಾಗ ಅಕ್ಕಪಕ್ಕ, ಎದುರು ಅಥವಾ ಹಿಂಬದಿಯಲ್ಲಿರುವ ವಾಹನಗಳ ವೇಗ, ಇರುವ ಸ್ಥಳ, ಚಲಿಸುವ ದಿಕ್ಕು ಹಾಗೂ ಬ್ರೇಕಿಂಗ್‌ಗೆ ಸಂಬಂಧಿಸಿದ ಮಾಹಿತಿಗಳು ಸಿಗ್ನಲ್ ಮೂಲಕ ಕ್ಷಣಮಾತ್ರದಲ್ಲಿ ವಿನಿಮಯಗೊಳ್ಳಲಿವೆ. ಇದರಿಂದ ಚಾಲಕನಿಗೆ ತನ್ನ ಸುತ್ತಮುತ್ತಲಿನ ವಾಹನಗಳ ಸ್ಪಷ್ಟ ಚಿತ್ರಣ ಸಿಗಲಿದೆ.
ಸದ್ಯ ಚಾಲ್ತಿಯಲ್ಲಿರುವ ಎಡಾಸ್ (ADAS) ತಂತ್ರಜ್ಞಾನವು ಕೇವಲ ಕ್ಯಾಮೆರಾ ಹಾಗೂ ರೇಡಾರ್ ಕಣ್ಣಿಗೆ ಕಾಣುವ ವಾಹನಗಳನ್ನು ಮಾತ್ರ ಗುರುತಿಸುತ್ತದೆ. ಆದರೆ ವಿ2ವಿ ತಂತ್ರಜ್ಞಾನವು ಬ್ಲೈಂಡ್ ಕರ್ವ್‌ಗಳಲ್ಲಿ ಅಡಗಿರುವ, ನೇರ ನೋಟಕ್ಕೆ ಸಿಗದ ವಾಹನಗಳು, ರಾಂಗ್ ಸೈಡ್‌ನಲ್ಲಿ ಬರುವ ವಾಹನಗಳು, ಎದುರಿನ ವಾಹನ ದಿಢೀರ್ ಬ್ರೇಕ್ ಹಾಕಿದಾಗ ಮತ್ತು ಆಂಬುಲೆನ್ಸ್‌ನಂತಹ ತುರ್ತು ಸೇವಾ ವಾಹನಗಳು ಬರುವುದನ್ನು ಮುಂಚಿತವಾಗಿಯೇ ಎಚ್ಚರಿಸುತ್ತದೆ. ಈ ಯೋಜನೆಯನ್ನು ಸರ್ಕಾರ ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸುತ್ತಿದೆ. ಅಕ್ಟೋಬರ್ 1, 2027ರಿಂದ ಜಾರಿಗೆ ಬರುವ ಮೊದಲ ಹಂತದಲ್ಲಿ ದ್ವಿಚಕ್ರ, ತ್ರಿಚಕ್ರ, ಕಾರುಗಳು ಹಾಗೂ ಸರಕು ಸಾಗಣೆ ವಾಹನಗಳಲ್ಲಿ ವಿ2ವಿ ತಂತ್ರಜ್ಞಾನ ಅಳವಡಿಸಿದ್ದರೆ ಅದು ನಿಗದಿತ ಮಾನದಂಡಕ್ಕೆ ಬದ್ಧವಾಗಿರಬೇಕಾಗುತ್ತದೆ. ಎರಡನೇ ಹಂತದಲ್ಲಿ ಅಕ್ಟೋಬರ್ 1, 2028ರಿಂದ ಉತ್ಪಾದನೆಯಾಗುವ 'ಎಲ್', 'ಎಂ' ಮತ್ತು 'ಎನ್' ವಿಭಾಗದ ಪ್ರತಿಯೊಂದು ಹೊಸ ವಾಹನಕ್ಕೂ ಈ ವಿ2ವಿ ಸಂಪರ್ಕ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಮೂಲಗಳಿಂಡ್ ತಿಳಿದುಬಂದಿದೆ.