image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ದೇಶ

ಇ20 ಪೆಟ್ರೋಲ್ ವಿರೋಧಿಸಿ ಆಪ್ ಪ್ರಧಾನಿ ನಿವಾಸ ಚಲೋ : ಕೇಜ್ರಿವಾಲ್ ತಡೆದ ದೆಹಲಿ ಪೊಲೀಸ್

ಇ20 ಪೆಟ್ರೋಲ್ ವಿರೋಧಿಸಿ ಆಪ್ ಪ್ರಧಾನಿ ನಿವಾಸ ಚಲೋ : ಕೇಜ್ರಿವಾಲ್ ತಡೆದ ದೆಹಲಿ ಪೊಲೀಸ್

ನವದೆಹಲಿ : ಕೇಂದ್ರ ಸರ್ಕಾರದ ಇ20 ಪೆಟ್ರೋಲ್ ನೀತಿಯನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದತ್ತ ಮೆರವಣಿಗೆ ಹೊರಟಿದ್ದ ಆಮ್ ಆದ್ಮಿ ಪಕ್ಷದ (ಆಪ್) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಪಕ್ಷದ ನಾಯಕರನ್ನು ದೆಹಲಿ ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ನಿಲ್ಲಿಸಿದ್ದಾರೆ. ಪೊಲೀಸರ ಈ ಕ್ರಮವನ್ನು ಖಂಡಿಸಿ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಸೇರಿದಂತೆ ನೂರಾರು ಬೆಂಬಲಿಗರು ಫಿರೋಜ್ ಶಹಾ ರಸ್ತೆಯಲ್ಲೇ ಕುಳಿತು ಧರಣಿ ನಡೆಸಿದರು. ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ವಾಹನಗಳ ಇಂಧನ ದಕ್ಷತೆ ಕುಸಿಯುತ್ತಿದೆ ಮತ್ತು ಎಂಜಿನ್‌ಗಳು ಹಾಳಾಗುತ್ತಿವೆ ಎಂದು ಆಪ್ ಆರೋಪಿಸಿದೆ. ಈ ನೀತಿಯ ವಿರುದ್ಧ ದೇಶಾದ್ಯಂತ ಸಾರ್ವಜನಿಕರಿಂದ ಸಂಗ್ರಹಿಸಲಾದ 2.30 ಲಕ್ಷಕ್ಕೂ ಹೆಚ್ಚು ಸಹಿಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಪ್ರಧಾನಿಯವರಿಗೆ ಸಲ್ಲಿಸಲು ಸುಮಾರು 100 ಬೆಂಬಲಿಗರೊಂದಿಗೆ ಈ ಮೆರವಣಿಗೆ ಆಯೋಜಿಸಲಾಗಿತ್ತು.

ಮೆರವಣಿಗೆಗೂ ಮುನ್ನ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಕೋಟ್ಯಂತರ ವಾಹನ ಮಾಲೀಕರ ಅಹವಾಲುಗಳನ್ನು ಆಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು. ಪ್ರತಿ ಪೆಟ್ರೋಲ್ ಬಂಕ್‌ಗಳಲ್ಲಿ ಗ್ರಾಹಕರಿಗೆ ಶುದ್ಧ ಪೆಟ್ರೋಲ್ ಹಾಗೂ ಇ20 ಪೆಟ್ರೋಲ್ ನಡುವೆ ಮುಕ್ತ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಬೇಕು ಎಂದು ಅವರು ಆಗ್ರಹಿಸಿದರು. ಇ20 ಇಂಧನ ನೀತಿಯ ವಿರುದ್ಧ ಆಪ್ ಇತ್ತೀಚೆಗೆ 'ಎಥೆನಾಲ್ ಟೌನ್ ಹಾಲ್' ಕಾರ್ಯಕ್ರಮ ನಡೆಸಿ, ಬೃಹತ್ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಫಿರೋಜ್ ಶಹಾ ರಸ್ತೆಯಲ್ಲಿ ಬಿಗಿ ಪೊಲೀಸ್ ಹಾಗೂ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರಿಗೆ ಮುಂದೆ ಸಾಗಲು ಅನುಮತಿ ನಿರಾಕರಿಸಲಾಗಿದೆ.

Category
ಕರಾವಳಿ ತರಂಗಿಣಿ